ಶಿರಸಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರವಾಗಿ ಹಮ್ಮಿಕೊಂಡ ಕೊನೆಯ ಬಹಿರಂಗ ಮೆರವಣಿಗೆಯಲ್ಲಿ ಮೋದಿ ಮೋದಿ ಎಂಬ ಕೂಗು ಕೇಳಿ ಬಂದಿದ್ದು ಕೆಲ ಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.
ಒಂದು ಹಂತದಲ್ಲಿ ಕಾರ್ಯಕರ್ತರು ಮನೆಯ ಮೇಲೆ ನುಗ್ಗಲು ಮುಂದಾದಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಯುವ ಪ್ರಮುಖ ಪ್ರದೀಪ ಶೆಟ್ಟಿ, ದೀಪಕ ದೊಡ್ಡೂರು, ಸಂತೋಷ ಶೆಟ್ಟಿ, ರಮೇಶ ದುಭಾಶಿ ಮುಂದಿನ ಅವಘ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು. ಹತ್ತು ನಿಮಿಷಗಳಿಗೂ ಅಧಿಕ ಕಾಲ ವಾತಾವರಣ ಬಿಸಿಬಿಸಿಯಾಗಿತ್ತು.
ಮೆರವಣಿಗೆ ಶಿವಾಜಿ ಚೌಕ, ಅಂಚೆ ವೃತ್ತದ ಮೂಲಕ ದೇವಿಕೇರೆ ತನಕ ಬಂದಿತು. ಸಮಯದ ಅಭಾವದಿಂದ ರಾಘವೇಂದ್ರ ಮಠದ ಬಳಿ ಅಂತ್ಯಗೊಂಡು ಸಭೆಯಾಗಿ ಪರಿವರ್ತನೆ ಆಗದೇ ಅಂಚೆ ವೃತ್ತದಲ್ಲೇ ಬಹಿರಂಗವಾಗಿ ಮತ ಯಾಚಿಸಲಾಯಿತು. ಅಭ್ಯರ್ಥಿ ಅಸ್ನೋಟಿಕರ್ ಒಮ್ಮೆ ಬದಲಾವಣೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
Advertisement
ರವಿವಾರ ನಗರದ ಮಾರಿಕಾಂಬಾ ದೇವಾಲಯದ ಆವಾರಣದಿಂದ ಮೆರವಣಿಗೆ ಮೂಲಕ ನಗರದ ಪ್ರಮುಖ ಮಾರ್ಗದಲ್ಲಿ ತೆರಳಿ ಮತಯಾಚನೆಯ ಮೆರವಣಿಗೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಜಂಟಿಯಾಗಿ ಹಮ್ಮಿಕೊಂಡಿತ್ತು. ಎತ್ತಿನ ಗಾಡಿ, ಡೊಳ್ಳಿನ ಕುಣಿತದ ಮೂಲಕ ಶುರುವಾಗಿದ್ದ ಮೆರವಣಿಗೆ ನಡುವೆ ಮಾರಿಕಾಂಬಾ ಬೀದಿಯಲ್ಲೇ ಮೋದಿ ಮೋದಿ ಎಂದು ಐದಾರು ಜನ ಹುಡುಗರು ಕೂಗಿದ್ದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು. ಉಭಯ ಪಕ್ಷಗಳ ಕಾರ್ಯಕರ್ತರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರತಿಯಾಗಿ ಉಭಯ ಪಕ್ಷಗಳ ಕಾರ್ಯಕರ್ತರೂ ರಾಹುಲ್ ರಾಹುಲ್ ಎಂದು ಘೋಷಣೆ ಕೂಗಿದರು.