ಚಿಕ್ಕೋಡಿ: ಪ್ರಧಾನಿ ಮೋದಿಯವರು ತಮ್ಮ ಆಡಳಿತಾವಧಿ ಯಲ್ಲಿ ಇಡಿ ದೇಶದ ಚಿತ್ರಣವನ್ನೆ ಬದಲಾಯಿಸಿದ್ದಾರೆ. ಅಲ್ಲದೇ ಭ್ರಷ್ಟಾಚಾರರಹಿತ ಆಡಳಿತ ನಡೆಸಿದ್ದಾರೆ. ಆದ್ದರಿಂದ ಮತದಾರರು ದೇಶ ಅಭಿವೃದ್ಧಿಗೆ ಮೋದಿ ಕೈ ಬಲ ಪಡಿಸಬೇಕು ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪ್ರಚಾರಾರ್ಥವಾಗಿ ನಿಪ್ಪಾಣಿ ನಿಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜ್ಯಸಭೆ ಸದಸ್ಯ ಡಾ| ಪ್ರಭಾಕರ ಕೋರೆ ಮಾತನಾಡಿ, ಕಳೆದ ಐದು ವರ್ಷಗಳಿಂದ ಒಂದು ದಿನ ರಜೆ ಪಡೆಯದೆ, ದಿನದಲ್ಲಿ 18 ಗಂಟೆ ಅವಿರತವಾಗಿ ದೇಶದ ಸೇವೆಗೈಯುತ್ತಿರುವ ಏಕಮೇವ ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿಯಾಗಿದ್ದಾರೆ.
ಅವರು ಜಾರಿಗೆ ತಂದ ಯೋಜನೆಗಳಲ್ಲಿ ಉಜ್ವಲಾ ಗ್ಯಾಸ್ ಯೋಜನೆಯಡಿಯಲ್ಲಿ ಕೇವಲ ಸ್ಥಳೀಯ ಕ್ಷೇತ್ರ ಸುಮಾರು 6 ಸಾವಿರಕ್ಕೂ ಅಧಿಕ ಬಡ ಮಹಿಳೆಯರಿಗೆ ಪ್ರಯೋಜನವಾಗಿದೆ. ಅವರ ಎಲ್ಲ ಯೋಜನೆಗಳು ಜನಪರವಾಗಿವೆ. ಮತದಾರರು ಅಣ್ಣಾಸಾಹೇಬ ಜೊಲ್ಲೆಗೆ ಬಹುಮತಗಳಿಂದ ಗೆಲ್ಲಿಸಿ ನರೇಂದ್ರ ಮೋದಿಯವರನ್ನು
ಮತ್ತೂಮ್ಮೆ ಪ್ರಧಾನಿಯಾಗಲು ಎಲ್ಲರೂ ಪರಿಶ್ರಮ ವಹಿಸಬೇಕು ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಯಾವುದೇ ಕ್ಷೇತ್ರವಾಗಲಿ, ಯಾವುದೇ ವಿಷಯವಾಗಲಿ ಅದನ್ನು ನಿಭಾಯಿಸಿಕೊಂಡು ಹೋಗುವ ಕಲೆ ಜೊಲ್ಲೆ ದಂಪತಿಯಲ್ಲಿದೆ. ಅವರನ್ನು ಬಹುಮತಗಳಿಂದ ಗೆಲ್ಲಿಸಿ ಪ್ರಧಾನಿ ಮೋದಿಜಿಯವರ ಕೈ ಬಲಪಡಿಸೋಣ ಎಂದರು.
ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರಮನ್ ಚಂದ್ರಕಾಂತ ಕೋಠಿವಾಲೆ, ಶಾಸಕ ಪಿ. ರಾಜೀವ್, ದುರ್ಯೋಧನ ಐಹೊಳೆ, ಬಿಜೆಪಿ ಗ್ರಾಮೀಣ ಅಧ್ಯಕ್ಷ ನ್ಯಾಯವಾದಿ ಸಂಜಯ ಶಿಂತ್ರೆ, ಬಾಳಾಸಾಹೇಬ ಪವಾರ, ಆನಂದ ಯಾದವ, ನಗರಸಭೆ ಸದಸ್ಯೆ ಸೋನಲ್ ಕೋಠಡಿಯಾ, ರಾಜ ಪಠಾಣ, ಮೊದಲಾದವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ನಾಯಿಕ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಎಂ.ಪಿ. ಪಾಟೀಲ, ಪಪ್ಪು ಪಾಟೀಲ, ಅವಿನಾಶ ಪಾಟೀಲ, ಸುಮಿತ್ರಾ ಉಗಳೆ, ಮತ್ತಿತರರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.