ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು (BJP) ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಗುರುವಾರ ತಡರಾತ್ರಿ ಬಿಜೆಪಿ ಹಿರಿಯ ನಾಯಕರ ಸಭೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ತಡರಾತ್ರಿ ಸಭೆ ನಡೆದಿದ್ದು, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಚಿವ ರಾಜನಾಥ್ ಸಿಂಗ್ ಸೇರಿ ಹಿರಿಯ ನಾಯಕರು ಸಭೆಯಲ್ಲಿದ್ದರು ಎಂದು ವರದಿಯಾಗಿದೆ.
ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ಸಿದ್ದತೆ ನಡೆಸುತ್ತಿದೆ. ಈ ಮೂಲಕ ಇನ್ನೂ ಸೀಟು ಹಂಚಿಕೆ ಕಗ್ಗಂಟಿನಲ್ಲಿರುವ ವಿಪಕ್ಷ ಬಣಕ್ಕೆ ಟಕ್ಕರ್ ನೀಡಲು ಪಕ್ಷ ಮುಂದಾಗಿದೆ.
ಪ್ರಧಾನಿ ಮೋದಿ ಅವರು ಅಮಿತ್ ಶಾ ಮತ್ತು ನಡ್ಡಾ ಜತೆಗೆ ತಮ್ಮ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಹಿರಿಯ ನಾಯಕರಾದ ದೇವೇಂದ್ರ ಫಡ್ನವೀಸ್, ಪ್ರಕಾಶ್ ಜಾವ್ಡೇಕರ್, ಮನ್ಸುಖ್ ಮಾಂಡವಿಯಾ, ಪುಷ್ಕರ್ ಧಾಮಿ, ಪ್ರಮೋದ್ ಸಾವಂತ್, ಭೂಪೇಂದ್ರ ಯಾದವ್, ಜ್ಯೋತಿರಾದಿತ್ಯ ಸಿಂಧಿಯಾ, ಕೇಶವ್ ಮೌರ್ಯ, ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್ ಗಢ, ಕೇರಳ, ತೆಲಂಗಾಣ, ರಾಜಸ್ಥಾನ, ಗೋವಾ, ಗುಜರಾತ್ ಮತ್ತು ಇತರ ರಾಜ್ಯಗಳ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳ ಮೇಲೆ ಸಭೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರತಿ ಸ್ಥಾನಕ್ಕೆ ಅಗ್ರ ಮೂರು ಅಭ್ಯರ್ಥಿಗಳನ್ನು ಹೆಸರಿಸುವ ಕಿರುಪಟ್ಟಿಗಳನ್ನು ರಚಿಸಲಾಗಿದೆ. ಮಾರ್ಚ್ 10 ಕ್ಕಿಂತ ಮುಂಚಿತವಾಗಿ ಲೋಕಸಭೆಯ ಶೇಕಡಾ 50 ಕ್ಕೂ ಹೆಚ್ಚು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಬಿಜೆಪಿ ಮುಂದಾಗಿದೆ.
ಪಂಜಾಬ್, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಸೀಟುಗಳ ಬಗ್ಗೆ ನಿರ್ಧರಿಸಲಾಗಿಲ್ಲ. ಆ ರಾಜ್ಯಗಳಲ್ಲಿ ಮೈತ್ರಿ ಇನ್ನೂ ಖಚಿತವಾಗದ ಕಾರಣ ಚರ್ಚೆ ನಡೆಯಲಿಲ್ಲ ಎನ್ನಲಾಗಿದೆ. ಪಂಜಾಬ್ ನಲ್ಲಿ ಅಕಾಲಿ ದಳ, ಆಂಧ್ರದಲ್ಲಿ ತೆಲುಗು ದೇಶಂ ಮತ್ತು ಜನಸೇನಾ ಪಕ್ಷ ಹಾಗು ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ನಡೆಸಲಿದೆ.