ನವದೆಹಲಿ: 2022-23ನೇ ಸಾಲಿನ ಬಜೆಟ್, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
2022-23ರ ಕೇಂದ್ರ ಬಜೆಟ್‌ನ ಸಕಾರಾತ್ಮಕ ಪರಿಣಾಮ ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, “ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಆಯಾಮಗಳ ಕಡೆಗೆ ಈ ಬಾರಿಯ ಬಜೆಟ್ ಕೇಂದ್ರೀಕರಿಸಿದೆ.
ಅವುಗಳೆಂದರೆ, ಗುಣಮಟ್ಟದ ಶಿಕ್ಷಣವನ್ನು ವಿಶ್ವವ್ಯಾಪಿಯಾಗಿಸುವುದು, ಕೌಶಲ್ಯಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ವಿನ್ಯಾಸ, ಅಂತಾರಾಷ್ಟ್ರೀಕರಣ ಮತ್ತು ಅನಿಮೇಷನ್ ವಿಷ್ಯುವಲ್ ಎಫೆಕ್ಟ್ ಗೇಮಿಂಗ್ ಕಾಮಿಕ್. ಇವನ್ನು ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಗುಣಮಟ್ಟದ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ, ಜೊತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಡಿಜಿಟಲ್ ಸ್ಕಿಲ್ ಎಕೋಸಿಸ್ಟಂ ನಿರ್ಮಿಸಲು ಹಾಗೂ ವಿದ್ಯುನ್ಮಾನ ವಿಭಾಗಗಳಲ್ಲಿ ಪರಿಣಿತಿ ಪಡೆದವರಿಗೆ ಔದ್ಯೋಗಿಕ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಳ್ಳಲು ಸೇತುವೆ ನಿರ್ಮಿಸುವ ಕೆಲಸವನ್ನು ಬಜೆಟ್‌ನಲ್ಲಿ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಡಿಜಿಟಲ್ ವಿವಿ ಪರಿಕಲ್ಪನೆಯೇ ಅಪೂರ್ವ
ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ನಿರ್ಧಾರವೇ ಅಪೂರ್ವವಾದದ್ದು. ಇದು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇರುವ ಸೀಟುಗಳ ಇತಿ-ಮಿತಿಗಳ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಡಿಜಿಟಲ್ ವಿವಿಯ ಸಹಭಾಗಿ ಸಂಸ್ಥೆಗಳಾದ ಕೇಂದ್ರ ಶಿಕ್ಷಣ ಇಲಾಖೆ, ಯುಜಿಸಿ ಹಾಗೂ ಎಸಿಐಟಿಇ ಸಂಸ್ಥೆಗಳಿಗೆ ಈ ಯೋಜನೆಯ ಅನುಷ್ಠಾನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಸೂಚಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.