ಮಾಸ್ಕೊ: ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ “ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪಾಸಲ್ ದಿ ಫಸ್ಟ್ ಕಾಲ್ಡ್” ಹೆಸರಿನ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕ್ರೆಮ್ಲಿನ್‌ನ ಸೇಂಟ್ ಕ್ಯಾಥರೀನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.
ರಷ್ಯಾ ಮತ್ತು ಭಾರತದ ನಡುವಿನ ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಉಭಯ ದೇಶಗಳ ನಡುವಿನ ಸೌಹಾರ್ದ ಸಂಬಂಧಗಳ ಅಭಿವೃದ್ಧಿಗೆ ಅವರ ವಿಶಿಷ್ಟ ಕೊಡುಗೆಗಾಗಿ ಭಾರತದ ಪ್ರಧಾನಿ ಮೋದಿಗೆ ಈ ಗೌರವವನ್ನು ನೀಡಲಾಯಿತು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅತ್ಯುನ್ನತ ಪ್ರಶಸ್ತಿಯನ್ನು ತಮಗೆ ನೀಡಿದ್ದಕ್ಕಾಗಿ ವ್ಲಾಡಿಮಿರ್ ಪುಟಿನ್ ರಿಗೆ ಧನ್ಯವಾದಗಳ ಅರ್ಪಿಸಿದರು. ಈ ಪ್ರಶಸ್ತಿಯನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸುವೆ ಹಾಗೂ ಭಾರತ- ರಷ್ಯಾದ ಶತಮಾನಗಳ ಸ್ನೇಹ ಹಾಗೂ ಪರಸ್ಪರ ನಂಬಿಕೆಗೆ ಈ ಗೌರವ ಪ್ರಾಪ್ತವಾಗಿದೆ. ನಿಮ್ಮ (ಪುಟಿನ್) ಎರಡುವರೆ ದಶಕದ ನಾಯಕತ್ವದಲ್ಲಿ ಭಾರತ -ರಷ್ಯಾ ಸಂಬಂಧ ಎಲ್ಲ ಕೋನಗಳಿಂದಲೂ ಗಟ್ಟಿಯಾಗಿದ್ದು, ಹೊಸ ಎತ್ತರಕ್ಕೆ ಏರಿದೆ ಎಂದು ಹೇಳಿದರು.
ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪಾಸಲ್ ಪ್ರಶಸ್ತಿಯನ್ನು 1698ರಲ್ಲಿ ತ್ಸಾರ್ ಪೀಟರ್ ದಿ ಗ್ರೇಟ್ ಸ್ಥಾಪಿಸಿದರು. ಸೇಂಟ್ ಆಂಡ್ರ್ಯೂ ಅವರ ಗೌರವಾರ್ಥವಾಗಿ ಈ ಪ್ರಶಸ್ತಿ ಸ್ಥಾಪಿಸಲಾಯಿತು. ಇವರು ಯೇಸುವಿನ ಮೊದಲ ಧರ್ಮ ಪ್ರಚಾರಕ ಮತ್ತು ರಷ್ಯಾದ ಸಂತ. ಇದನ್ನು ಅತ್ಯಂತ ಮಹೋನ್ನತ ನಾಗರಿಕ ಅಥವಾ ಮಿಲಿಟರಿ ಅರ್ಹತೆಗಾಗಿ ಮಾತ್ರ ನೀಡಲಾಗುತ್ತದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧದ ಮಧ್ಯೆ ಪಾಶ್ಚಿಮಾತ್ಯ ದೇಶಗಳೊಂದಿಗೆ ದೀರ್ಘಾವಧಿ ಸಂಬಂಧ ಕಾಪಾಡಿಕೊಳ್ಳುವ ಸಲುವಾಗಿ ಎರಡು ದಿನಗಳ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಮಾಸ್ಕೋಗೆ ತೆರಳಿದ್ದಾರೆ. ಕಳೆದ ತಿಂಗಳು ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಿದ ನಂತರ ನರೇಂದ್ರ ಮೋದಿಯವರ ಮೊದಲ ಭೇಟಿ ಇದಾಗಿದೆ. ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ಇದು ರಷ್ಯಾಕ್ಕೆ ಅವರ ಮೊದಲನೇ ಭೇಟಿಯಾಗಿದೆ.