Advertisement

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

11:30 PM Apr 19, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಿರುವ ಬೃಹತ್‌ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಎರಡೂ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಮೇಲ್ಪಟ್ಟು ಜನ ಸೇರುವ ನಿರೀಕ್ಷೆ ಇದೆ.

Advertisement

ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿಯಲ್ಲಿ ನಡೆಯುವ ಸಮಾವೇಶಕ್ಕೆ ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ಅಲ್ಲಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸುವ ಬೃಹತ್‌ ಸಾರ್ವಜನಿಕ ಸಭೆಗೆ ಸಂಜೆ 4 ಗಂಟೆಗೆ ಆಗಮಿಸಲಿದ್ದಾರೆ. ಇಲ್ಲಿ ಸುಮಾರು 1.5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಬೆಂಗಳೂರು ಸುತ್ತಮುತ್ತಲಿನ ಎಲ್ಲ ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಎರಡು ಸಮಾವೇಶವನ್ನು ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ವಿಪಕ್ಷ ನಾಯಕ ಆರ್‌.ಅಶೋಕ್‌, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಜೆಡಿಎಸ್‌ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸಹಿತ ಬಿಜೆಪಿ ಹಾಗೂ ಜೆಡಿಎಸ್‌ನ ಒಟ್ಟು 36 ಪ್ರಮುಖರು ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಸುತ್ತಮುತ್ತಲಿನ ಭಾಗಗಳಿಂದ ಜನರನ್ನು ಕರೆತರುವುದಕ್ಕೆ ಒಟ್ಟು 1,500 ಬಸ್‌ ನಿಯೋಜನೆ ಮಾಡಲಾಗಿದ್ದು, 7,000 ಜನರು ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮಹಿಳೆಯರ ಪ್ರವೇಶಕ್ಕಾಗಿ ಇದೇ ಮೊದಲ ಬಾರಿಗೆ ಪಿಂಕ್‌ ಬೂತ್‌ ತೆರೆಯಲಾಗಿದೆ. ಒಟ್ಟು 28 ಬ್ಲಾಕ್‌ಗಳಾಗಿ ಸಮಾವೇಶ ಸ್ಥಳವನ್ನು ವರ್ಗೀಕರಿಸಲಾಗಿದೆ. ಸಮಾವೇಶ ನಡೆಯುವ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಸಂಜೆ ಭೇಟಿ ನೀಡಿ ಸಿದ್ಧತೆಯ ಪರಿಶೀಲನೆ ನಡೆಸಿದರು.

1 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ
ಮೋದಿ ಆಗಮನದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಗಳಿಂದ ಸುಮಾರು 1.50 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು 25 ಎಕ್ರೆ ಜಾಗದಲ್ಲಿ ಸಮಾವೇಶ ನಡೆಯುತ್ತಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರೂ ಪಾಲ್ಗೊಳ್ಳಲಿದ್ದಾರೆ.

Advertisement

10 ವರ್ಷಗಳ ಬಳಿಕ ಮೋದಿ ಚಿಕ್ಕಬಳ್ಳಾಪುರಕ್ಕೆ
ಚಿಕ್ಕಬಳ್ಳಾಪುರ: ಬರೋಬ್ಬರಿ 10 ವರ್ಷಗಳ ಬಳಿಕ ಪ್ರಧಾನಿ ಮೋದಿ ಚುನಾವಣ ಪ್ರಚಾರ ಕಾರ್ಯಕ್ಕೆಂದು ಜಿಲ್ಲೆಗೆ ಆಗಮಿಸುತ್ತಿದ್ದು, ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-7ರ ಚೊಕ್ಕಹಳ್ಳಿ ಬಳಿ ಏರ್ಪಡಿಸಿರುವ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಡಾ| ಕೆ.ಸುಧಾಕರ್‌ ಪರ ಮತಯಾಚನೆ ನಡೆಸಲಿದ್ದಾರೆ.

1,500 ಪೊಲೀಸರು ಭದ್ರತೆಗೆ: ಎಸ್ಪಿ
ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ಚುನಾವಣ ಪ್ರಚಾರಕ್ಕೆಂದು ನಿಗದಿಯಾಗಿರುವ ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಸಮೀಪದ ಬಹಿರಂಗ ಸಮಾವೇಶದ ಸ್ಥಳದಲ್ಲಿ ಯಾವುದೇ ರೀತಿ ಲೋಪ ಆಗದಂತೆ ಭದ್ರತೆಗಾಗಿ ಬರೋಬ್ಬರಿ 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ ಶುಕ್ರವಾರ ಉದಯವಾಣಿಗೆ ತಿಳಿಸಿದರು.

ಶನಿವಾರ ಮಧ್ಯಾಹ್ನ 3.30ಕ್ಕೆ ಪ್ರಧಾನಿ ಸಮಾವೇಶಕ್ಕೆ ಬರಲಿದ್ದು, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ, ಜೆಡಿಎಸ್‌ ಪಕ್ಷಗಳ ಕಾರ್ಯಕರ್ತರ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next