Advertisement

ಮತ್ತೆ ರಾಜ್ಯದಲ್ಲಿ ಮೋದಿ, ರಾಹುಲ್‌ ಪ್ರವಾಸ

06:00 AM Apr 23, 2018 | |

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇ 1 ರಿಂದ 8 ರವರೆಗೆ ರಾಜ್ಯದಲ್ಲಿ ನಿರಂತರ ಪ್ರವಾಸ ಕೈಗೊಂಡು ಹದಿನೈದು ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

Advertisement

ಮೇ 1ರಂದು ಬೆಳಗಾವಿ, ಉಡುಪಿ, ಚಾಮರಾಜನಗರ, ಮೇ 3ರಂದು ಬಳ್ಳಾರಿ, ಬೆಂಗಳೂರು, ಕಲಬುರಗಿ, ಮೇ 5ರಂದು ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ, ಮೇ 7ರಂದು ರಾಯಚೂರು, ಕೋಲಾರ, ಚಿತ್ರದುರ್ಗ, ಮೇ 8ರಂದು ಮಂಗಳೂರು, ವಿಜಯಪುರ, ಬೆಂಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು 15 ರ್ಯಾಲಿಗಳಲ್ಲಿ ಪಾಲ್ಗೊಂಡು ಕೆಲವೆಡೆ ರೋಡ್‌ ಶೋ ಸಹ ನಡೆಸಲಿದ್ದಾರೆಂದು ತಿಳಿದು ಬಂದಿದೆ. ಐದು ದಿನಗಳ ಪ್ರವಾಸ ಸಂದರ್ಭದಲ್ಲಿ ಮಂದಿರ-ಮಠಗಳ ಭೇಟಿಯೂ ಇರಲಿದ್ದು, ಮೇ 1ರಂದು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ.

ರಾಜ್ಯ ಬಿಜೆಪಿ ವತಿಯಿಂದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ನರೇಂದ್ರಮೋದಿ ಅವರು 20 ರ್ಯಾಲಿಗಳಲ್ಲಿ ಭಾಗವಹಿಸುವಂತೆ ಕೋರಿಕೆ ಸಲ್ಲಿಸಲಾಗಿತ್ತು. ಅದೇ ರೀತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ರ್ಯಾಲಿಗಳಲ್ಲಿ ಭಾಗವಹಿಸುವಂತೆ ಕೋರಿಕೆ ಸಲ್ಲಿಸಲಾಗಿದ್ದು, ದಿನಾಂಕ ನಿಗದಿಯಾಗಬೇಕಿದೆ.

ಏ.26, 27 ರಂದು ರಾಹುಲ್‌
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್‌ 26 ಹಾಗೂ 27 ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ರ್ಯಾಲಿಗಳಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಏಪ್ರಿಲ್‌ 26 ರಂದು ದೆಹಲಿಯಿಂದ ಗೋವಾ ಮೂಲಕ ಉತ್ತರಕನ್ನಡ ಜಿಲ್ಲೆಗೆ ಆಗಮಿಸಲಿರುವ ರಾಹುಲ್‌ಗಾಂಧಿ ಇಡೀ ದಿನ ಅಂಕೋಲ, ಹೊನ್ನಾವರ, ಭಟ್ಕಳಗಳಲ್ಲಿ ರ್ಯಾಲಿ, ರೋಡ್‌ಶೋ ನಡೆಸಿ ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಸಭೆ ನಡೆಸಿ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದಲ್ಲಿ ದರ್ಶನ ಪಡೆದು ನಂತರ ಗೋಣಿಕೊಪ್ಪಲು, ಪಿರಿಯಾಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮೈಸೂರು ಮೂಲಕ ದೆಹಲಿಗೆ ತೆರಳಲಿದ್ದಾರೆ.

Advertisement

ಈ ಮಧ್ಯೆ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಎಐಸಿಸಿ ವತಿಯಿಂದ ಜಿಲ್ಲೆಗೊಬ್ಬರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಚುನಾವಣೆ ಮುಗಿಯುವವರೆಗೂ ವೀಕ್ಷಕರು ಜಿಲ್ಲೆಯಲ್ಲಿಯೇ ಉಳಿದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿ ಕೆಲಸ ಮಾಡಲು ಹೈಕಮಾಂಡ್‌ ಸೂಚನೆ ನೀಡಿದೆ. ಸೋಮವಾರ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಜಿಲ್ಲಾ ಉಸ್ತುವಾರಿಗಳ ಸಭೆ ಕರೆದಿದ್ದು, ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸಲಹೆ, ಸೂಚನೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next