ನವದೆಹಲಿ:ಭಾರತ ಮತ್ತು ನೇಪಾಳ ಸರ್ಕಾರಗಳು ತಮ್ಮ ಬಾಂಧವ್ಯವನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ಯಲಿವೆ ಮತ್ತು ಗಡಿ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್ (ಪ್ರಚಂಡ) ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆ ಬಳಿಕ ಅವರು ಈ ಮಾತುಗಳನ್ನಾಡಿದ್ದಾರೆ.
ಉಭಯ ನಾಯಕರ ಮಾತುಕತೆಯ ನಂತರ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಯಲ್ಲಿ ಮೋದಿಯವರು ತಮ್ಮ ಚರ್ಚೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. “ನಾವಿಬ್ಬರೂ ಜಂಟಿಯಾಗಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ವರ್ಚುವಲ್ ಆಗಿ ನೆರವೇರಿಸಿದ್ದೇವೆ. ಎರಡೂ ದೇಶಗಳ ನಡುವಿನ ಪಾಲುದಾರಿಕೆಯನ್ನು ಸೂಪರ್‌ಹಿಟ್ ಮಾಡುವ ನಿಟ್ಟಿನಲ್ಲಿ ಮಹತ್ವದ ಮಾತುಕತೆಯನ್ನೂ ನಡೆಸಿದ್ದೇವೆ’ ಎಂದರು.
9 ವರ್ಷಗಳ ಹಿಂದೆ ಅಂದರೆ 2014ರಲ್ಲಿ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ತಿಂಗಳಲ್ಲಿ ನೇಪಾಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದೆ. ಆಗ ನಾನು ಭಾರತ-ನೇಪಾಳ ಸಂಬಂಧಕ್ಕೆ ಹೈವೇಸ್, ಐ-ವೇಸ್ ಮತ್ತು ಟ್ರಾನ್ಸ್-ವೇಸ್ ಎಂಬ “ಸೂತ್ರ’ವನ್ನು ನೀಡಿದ್ದೆ. ಈ ಸೂತ್ರವು ಈಗ ಸೂಪರ್‌ಹಿಟ್ ಆಗಿದೆ ಎಂದೂ ಮೋದಿ ಸ್ಮರಿಸಿಕೊಂಡರು.
ಮಾತುಕತೆಯ ನಂತರ ಪ್ರಧಾನಿ ಮೋದಿ ಹಾಗೂ ಪ್ರಚಂಡ ಅವರು, ಭಾರತದ ರುಪೈದಿಹಾ ಮತ್ತು ನೇಪಾಳದ ನೇಪಾಳ್‌ಗಂಜ್‌ನಲ್ಲಿನ ಸಮಗ್ರ ಚೆಕ್‌ಪೋಸ್ಟ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಜತೆಗೆ, ಬಿಹಾರದ ಬಥಾ°ಹಾದಿಂದ ನೇಪಾಳದ ಕಸ್ಟಮ್‌ಯಾರ್ಡ್‌ಗೆ ಸಂಚರಿಸುವ ಸರಕು ರೈಲಿಗೂ ಹಸಿರು ನಿಶಾನೆ ತೋರಿದರು. ಆದಷ್ಟು ಬೇಗ, ರಾಮಾಯಣ ಸರ್ಕಿಟ್‌ಗೆ ಸಂಬಂಧಿಸಿದ ಯೋಜನೆಯನ್ನು ತ್ವರಿತಗೊಳಿಸುವ ಕುರಿತೂ ಅವರು ಚರ್ಚಿಸಿದರು.
7 ಒಪ್ಪಂದಗಳಿಗೆ ಸಹಿ
ಭಾರತ ಮತ್ತು ನೇಪಾಳದ ಗಡಿಗಳ ನಡುವಿನ ಪೆಟ್ರೋಲಿಯಂ ಪೈಪ್‌ಲೈನ್ ವಿಸ್ತರಣೆ, ಚೆಕ್‌ಪೋಸ್ಟ್‌ಗಳ ನಿರ್ಮಾಣ, ಜಲವಿದ್ಯುತ್ಛಕ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಳ ಕುರಿತು ಉಭಯ ನಾಯಕರು ಒಟ್ಟು 7 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಒಪ್ಪಂದಗಳ ಪೈಕಿ ಪ್ರಮುಖವಾದುದೆಂದರೆ, “ಭಾರತ-ನೇಪಾಳ ಪರಿಷ್ಕೃತ ಸಾರಿಗೆ ಒಪ್ಪಂದ’. ಎರಡೂ ರಾಷ್ಟ್ರಗಳ ನಡುವೆ ಪರಸ್ಪರ ಒಪ್ಪಿತ ಮಾರ್ಗಗಳಲ್ಲಿ ನಡೆಯುವ ಸರಕುಗಳ ಮುಕ್ತ ಸಾಗಣೆಗೆ ಸಂಬಂಧಿಸಿದ ಒಪ್ಪಂದ ಇದಾಗಿದೆ.