Advertisement

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

12:15 AM May 07, 2021 | Team Udayavani |

ಹೊಸದಿಲ್ಲಿ: “ಯಾವುದೇ ಕಾರಣಕ್ಕೂ ಲಸಿಕೆ ವಿತರಣೆ ವೇಗಕ್ಕೆ ಬ್ರೇಕ್‌ ಹಾಕಬೇಡಿ. ಲಾಕ್‌ಡೌನ್‌ನಂಥ ನಿರ್ಬಂ ಧಗಳಿದ್ದರೂ ಲಸಿಕೆ ಹಾಕಿಸಿಕೊಳ್ಳಲು ಹೋಗುವ ನಾಗರಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ. ವ್ಯಾಕ್ಸಿನ್‌ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಬೇರೆ ಕೆಲಸ ಕೊಡಬೇಡಿ…’

Advertisement

ಇದು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸೂಚನೆ.

ದೇಶಾದ್ಯಂತ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗುರುವಾರ ಕೊರೊನಾ ಸ್ಥಿತಿಗತಿ ಪರಿಶೀಲನ ಸಭೆ ನಡೆಸಿದ ಮೋದಿ, ಆರೋಗ್ಯಸೇವಾ ಮೂಲಸೌಕರ್ಯಗಳ ಹೆಚ್ಚಳಕ್ಕೆ ರಾಜ್ಯಗಳಿಗೆ ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಲಸಿಕೆ ಅಭಿಯಾನದ ಜತೆಗೆ ಲಸಿಕೆ ಉತ್ಪಾದನೆ ಹೆಚ್ಚಳದ ಪ್ರಗತಿ ಪರಿಶೀಲನೆಯನ್ನೂ ಅವರು ನಡೆಸಿದ್ದಾರೆ.

ಯಾವುದೇ ನಿರ್ಬಂಧಗಳಿದ್ದರೂ ಲಸಿಕೆ ವಿತರಣೆ ಪ್ರಕ್ರಿಯೆಯ ವೇಗ ತಗ್ಗದಂತೆ ನೋಡಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ. ಲಸಿಕೆ ವ್ಯರ್ಥವಾಗುವಿಕೆಯ ರಾಜ್ಯವಾರು ವಿವರಗಳನ್ನೂ ಮೋದಿ ಪಡೆದಿದ್ದಾರೆ. ಇದೇ ವೇಳೆ, 45 ವರ್ಷ ಮೇಲ್ಪಟ್ಟ ಶೇ.31ರಷ್ಟು ಜನರಿಗೆ ಈಗಾಗಲೇ ಮೊದಲ ಡೋಸ್‌ ವಿತರಿಸಲಾಗಿದೆ. ರಾಜ್ಯಗಳಿಗೆ ಸುಮಾರು 17.7 ಕೋಟಿ ಲಸಿಕೆ ಪೂರೈಸಲಾಗಿದೆ ಎಂದು ಪ್ರಧಾನಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿರುವ 12 ರಾಜ್ಯಗಳು ಯಾವುವು, ಅತ್ಯಧಿಕ ಸೋಂಕಿತರಿರುವ ಜಿಲ್ಲೆಗಳು ಯಾವುವು ಎಂಬ ಬಗ್ಗೆಯೂ ವಿವರಿಸಲಾಗಿದೆ.

3,000 ಆಕ್ಸಿಜನ್‌ ಸಾಂದ್ರಕಗಳ ಆಗಮನ: ವಿದೇಶಗಳಿಂದ ದೇಣಿಗೆ ರೂಪದಲ್ಲಿ ಪಡೆದ ಆಕ್ಸಿಜನ್‌ ಸಾಂದ್ರಕಗಳು ಯಾವುದೇ ಬಂದರಿನಲ್ಲಿ ಕಸ್ಟಮ್ಸ್‌ ಅನುಮತಿ ಸಿಗದೇ ಬಾಕಿ ಉಳಿದಿಲ್ಲ. ಕಸ್ಟಮ್ಸ್‌ ಸಂಬಂಧಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಎಲ್ಲ 3 ಸಾವಿರ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ವಿದೇಶಗಳಿಂದ ಬಂದ ಸಾಂದ್ರಕಗಳು ಕಸ್ಟಮ್ಸ್‌ ಅನುಮತಿ ಸಿಗದೇ ಬಂದರುಗಳಲ್ಲೇ ಉಳಿಯುವಂತಾಗಿದೆ ಎಂಬ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

Advertisement

ಒಂದೇ ದಿನ 4 ಲಕ್ಷ: ದೇಶದಲ್ಲಿ ಸೋಂಕು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬುಧವಾರದಿಂದ ಗುರುವಾರಕ್ಕೆ 4.12 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದ್ದು, 3,980 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,10,77,410ಕ್ಕೇರಿದರೆ, ಸಾವಿನ ಸಂಖ್ಯೆ 2,30,168ಕ್ಕೇರಿದೆ.

ಉತ್ತರದಲ್ಲಿ “ಯುಕೆ’, ದಕ್ಷಿಣದಲ್ಲಿ “ಭಾರತದ ರೂಪಾಂತರಿ’ ಅಬ್ಬರ :

ಪ್ರಸ್ತುತ ಉತ್ತರ ಭಾರತದಲ್ಲಿ ಕೊರೊನಾದ ಯುಕೆ ರೂಪಾಂತರಿಯ ಪ್ರಭಾವ ಹೆಚ್ಚಿದ್ದರೆ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಸೋಂಕಿನ ಭಾರತದ ರೂಪಾಂತರಿ ಹೆಚ್ಚು ಸಾವು-ನೋವು ಉಂಟುಮಾಡುತ್ತಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುಜೀತ್‌ ಸಿಂಗ್‌ ಹೇಳಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ದೇಶದಲ್ಲಿ ಯುಕೆ ರೂಪಾಂತರಿಯ ಪ್ರಭಾವ ಕ್ರಮೇಣ ಕುಗ್ಗುತ್ತಿದೆ ಎಂದೂ ತಿಳಿಸಿದ್ದಾರೆ. ಕೊರೊನಾದ ದಕ್ಷಿಣ ಆಫ್ರಿಕಾದ ಸ್ವರೂಪವು ತೆಲಂಗಾಣ ಮತ್ತು ದಿಲ್ಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದೂ ಸಿಂಗ್‌ ಹೇಳಿದ್ದಾರೆ.

ಪೇಟೆಂಟ್‌ ಸಡಿಲಿಕೆ: ಭಾರತದ ಕೋರಿಕೆಗೆ ಮತ್ತಷ್ಟು ಬಲ :

ಕೋವಿಡ್ ಲಸಿಕೆಗಳ ಮೇಲಿನ ಪೇಟೆಂಟ್‌ ಮತ್ತು ಬೌದ್ಧಿಕ ಆಸ್ತಿ ಕಾಯ್ದೆಯನ್ವಯ ಲಸಿಕೆಗಳಿಗಿರುವ ರಕ್ಷಣೆಯ ನಿಯಮಗಳನ್ನು ಸಡಿಲಗೊಳಿಸಬೇಕು ಎಂಬ ಭಾರತದ ಕೋರಿಕೆಗೆ ಈಗ ಹಲವು ರಾಷ್ಟ್ರಗಳು ಧ್ವನಿಗೂಡಿಸಿವೆ. ಭಾರತ ಮತ್ತು ದಕ್ಷಿಣ ಆಫ್ರಿಕಾದ ಆಗ್ರಹಕ್ಕೆ ಹೊಸದಾಗಿ ಅಮೆರಿಕ ಹಾಗೂ ಫ್ರಾನ್ಸ್‌ ಬೆಂಬಲ ವ್ಯಕ್ತಪಡಿಸಿದೆ. ಈ ನಿಯಮಗಳನ್ನು ಸಡಿಲಿಸುವುದರಿಂದ ಬಡ ರಾಷ್ಟ್ರಗಳಿಗೆ ಹೆಚ್ಚಿನ ಡೋಸ್‌ ಲಸಿಕೆಗಳು ಲಭ್ಯವಾಗುವುದಲ್ಲದೇ ಕೋವಿಡ್ ಸೋಂಕಿಗೆ ಕಡಿವಾಣ ಹಾಕಲೂ ಇದು ನೆರವಾಗಲಿದೆ ಎಂಬುದು ಈ ರಾಷ್ಟ್ರಗಳ ಆಶಯವಾಗಿದೆ. ಕಳೆದ ಅಕ್ಟೋಬರ್‌ನಲ್ಲೇ ಭಾರತ ಮತ್ತು ದ. ಆಫ್ರಿಕಾ ಇದೇ ಅಭಿಪ್ರಾಯವನ್ನು ಜಗತ್ತಿನ ಮುಂದಿಟ್ಟಿತ್ತು. ಆದರೆ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಾದದ್ದು ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಒ). ಇದರಲ್ಲಿ 164 ಸದಸ್ಯ ರಾಷ್ಟ್ರಗಳಿದ್ದು, ಒಂದು ರಾಷ್ಟ್ರ ವಿರೋಧ ವ್ಯಕ್ತಪಡಿಸಿದರೂ ಈ ನಿಯಮ ಜಾರಿ ಸಾಧ್ಯವಿಲ್ಲ. ಎಲ್ಲರ ಒಮ್ಮತದಿಂದ ಮಾತ್ರವೇ ಇದನ್ನು ಸಾಧ್ಯವಾಗಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next