ಲಕ್ನೋ : ಉತ್ತರ ಪ್ರದೇಶದಲ್ಲಿ ಮುಂದಿನ ಸರಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಅಖೀಲೇಶ್ ಯಾದವ್ ಸರಕಾರದ ಸಚಿವರು ಹಾಗೂ ಶಾಸಕರು ತಮ್ಮ ವಶದಲ್ಲಿರುವ ಸರಕಾರಿ ಬಂಗಲೆಗಳನ್ನು ಹೊಸ ಸರಕಾರದ ಆದೇಶ ಬರುವ ಮುನ್ನವೇ ತರಾತುರಿಯಿಂದ ತೆರವು ಗೊಳಿಸುತ್ತಿರುವುದು ಅಚ್ಚರಿಯ ವಿಷಯವಾಗಿದೆ.
ಈ ರೀತಿ ಎಲ್ಲರಿಗಿಂತ ಮೊದಲಾಗಿ ತಮ್ಮ ಸರಕಾರಿ ಬಂಗಲೆಯನ್ನು ತೆರವುಗೊಳಿಸಿರುವವರು ಸಮಾಜವಾದಿ ಪಕ್ಷದ ಸರಕಾರದಲ್ಲಿ ಸಚಿವರಾಗಿದ್ದ ರವಿದಾಸ್ ಮೆಹರೋತ್ರಾ ಅವರು.
ವಿಶೇಷ ಹಾಗೂ ಕುತೂಹಲದ ಸಂಗತಿ ಎಂದರೆ ಮೆಹರೋತ್ರಾ ಅವರು ತಾವು ತೆರವುಗೊಳಿಸಿರುವ ಸರಕಾರಿ ಬಂಗಲೆಗೆ ಜಡಿಯಲಾಗಿರುವ ಬೀಗವು ಆಗ್ರಾದಲ್ಲಿ ತಯಾರಾದ “ಮೋದಿ ಮ್ಯಾಜಿಕ್’ ಹೆಸರಿನ ಬೀಗವಾಗಿದೆ.
ಮೋದಿ ಮ್ಯಾಜಿಕ್ ಬ್ರಾಂಡಿನ ಬೀಗವನ್ನು ಸ್ವತಃ ಮೆಹರೋತ್ರಾ ಅವರೇ ಆಯ್ಕೆ ಮಾಡಿದರೇ ಅಥವಾ ಬಂಗಲೆ ತೆರವುಗೈದ ಸಿಬಂದಿಗಳು ತಂದಿರುವ ಬೀಗ ಅದಾಗಿರಬಹುದೇ ಎಂಬುದು ಗೊತ್ತಾಗಿಲ್ಲ.
ಮೆಹರೋತ್ರಾ ಅವರು 2012ರಲ್ಲಿ ಲಕ್ನೋ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಜಯಿಸಿದವರು; ಆ ಬಾರಿ ಅವರು ಇದೇ ಕ್ಷೇತ್ರದಲ್ಲಿ ಬಿಜೆಪಿಯ ಬೃಜೇಶ್ ಪಾಠಕ್ ಅವರಿಂದ ಪರಾಜಿತರಾಗಿದ್ದಾರೆ.