Advertisement

ಆಧುನಿಕ ರಾಷ್ಟ್ರಪಿತ ಮೋದಿ

08:50 AM Sep 26, 2019 | Team Udayavani |

ನ್ಯೂಯಾರ್ಕ್‌: ಶತಮಾನಗಳ ಇತಿಹಾಸ ಹೊಂದಿರುವ ಭಾರತವನ್ನು ಸರ್ವಾಂಗೀಣ ಅಭಿವೃದ್ಧಿಯ ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಧುನಿಕ ರಾಷ್ಟ್ರಪಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ಲಾಘಿಸಿದ್ದಾರೆ.

Advertisement

ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಡೆಸಿದ ಜಂಟಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಡಿ ಭಾರತ ಮತ್ತು ಅಮೆರಿಕದ ಸ್ನೇಹ ಸಂಬಂಧ ಮತ್ತಷ್ಟು ಬಲವಾಗಿದೆ. ಎರಡೂ ದೇಶಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ ಎಂದರು.

ಪಾಕಿಸ್ಥಾನ ವಿರುದ್ಧ ಕಿಡಿ
ಜಗತ್ತಿಗೇ ಮಾರಕವಾಗಿ ಪರಿಣಮಿಸಿರುವ ಇರಾನ್‌ ದೇಶದಂತೆಯೇ ಪಾಕಿಸ್ಥಾನ ಸಹ ಅಪಾಯ ಕಾರಿ ದೇಶವಾಗಿ ಪರಿಗಣಿಸಿದೆ. ಭಾರತದ ವಿರುದ್ಧ ಆ ದೇಶ ನಡೆಸುವ ಯಾವುದೇ ರೀತಿಯ ಭಯೋತ್ಪಾದನೆಯನ್ನು ಮಟ್ಟ ಹಾಕು ವಲ್ಲಿ ಭಾರತ ಸಮರ್ಥವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಸದ್ಯದಲ್ಲೇ ವ್ಯಾಪಾರ ಒಪ್ಪಂದ
ಭಾರತ ಮತ್ತು ಅಮೆರಿಕ ನಡುವೆ 4.50 ಲಕ್ಷ ಕೋಟಿ ರೂ.ಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಒಡಂಬಡಿಕೆಯೊಂದು ರೂಪುಗೊಳ್ಳ ಲಿದೆ. ಜತೆಗೆ ಎರಡೂ ದೇಶಗಳಲ್ಲಿ ಸುಮಾರು 50,000 ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 9.45ರ ಸುಮಾರಿಗೆ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿ ಹಾಲ್‌ನಲ್ಲಿ ಸೇರಿದ ಇಬ್ಬರೂ ನಾಯಕರು, ದ್ವಿಪಕ್ಷೀಯ ಸಂಬಂಧಗಳ ಕುರಿತಾಗಿ ಮಾತನಾಡಿದರು. ಹ್ಯೂಸ್ಟನ್‌ನಲ್ಲಿ ರವಿವಾರ ನಡೆದಿದ್ದ “ಹೌಡಿ ಮೋದಿ’ ಎಂಬ ಅನಿವಾಸಿ ಭಾರತೀಯ ಮಹಾಸಭೆಯಲ್ಲಿ ಇಬ್ಬರೂ ಭೇಟಿಯಾದ ಅನಂತರ ಇದು ಅವರಿಬ್ಬರ ಎರಡನೇ ಭೇಟಿ.

Advertisement

ಪಾಕ್‌ ವಿರುದ್ಧ ಪರೋಕ್ಷ ಗುಡುಗು
ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ ಅವರು ಪಾಕಿಸ್ಥಾನದ ಹೆಸರೆತ್ತದೆ ವಾಗ್ಧಾಳಿ ನಡೆಸಿದರು. ಭಯೋತ್ಪಾದನೆಯ ಸಂಘಟನೆಗಳಿಗೆ ಹಣ ಮತ್ತು ಶಸ್ತ್ರಾಸ್ತ್ರಗಳು ಹರಿದುಬರುವುದನ್ನು ತಪ್ಪಿಸುವ ಉದ್ದೇಶದಿಂದ ಉಗ್ರರಿಗೆ ಹಣಕಾಸು ನೆರವು ನೀಡುವ ದೇಶಗಳನ್ನು ವಿಶ್ವಸಂಸ್ಥೆಯ “ನಿರ್ಬಂಧಿತ ದೇಶಗಳ ಪಟ್ಟಿ’ಗೆ ಸೇರಿಸಲಾಗುತ್ತಿದೆ. ಜತೆಗೆ ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಸಂಸ್ಥೆ ಕೂಡ ಅಂಥ ದೇಶಗಳನ್ನು ಗ್ರೇ ಲಿಸ್ಟ್‌ ಹಾಗೂ ಬ್ಲಾ ಕ್‌ ಲಿಸ್ಟ್‌ಗೆ ಸೇರಿಸುವ ಮೂಲಕ ಅಂಥ ದೇಶಗಳಿಗೆ ಪಾಠ ಕಲಿಸುತ್ತದೆ. ಆದರೆ ಇಂಥ ಕ್ರಮಗಳಿಗೆ ಕೆಲವು ರಾಷ್ಟ್ರಗಳು ರಾಜಕೀಯ ಬಣ್ಣ ಬಳಿಯುತ್ತಿವೆ. ಆ ಕುತಂತ್ರಗಳಿಗೆ ಮಣೆ ಹಾಕದೆ ಉಗ್ರರಿಗೆ ಹಣಕಾಸು ನೆರವು ನೀಡುವ ರಾಷ್ಟ್ರಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಉಗ್ರ ತರಬೇತಿ ನಿಜ: ಇಮ್ರಾನ್‌
ಕುಖ್ಯಾತ ಉಗ್ರ ಒಸಾಮ ಬಿನ್‌ ಲಾದನ್‌ನಿಂದ ಸ್ಥಾಪಿಸಲ್ಪಟ್ಟಿರುವ ಅಲ್‌ ಕಾಯಿದಾ ಸಹಿತ ಅನೇಕ ಉಗ್ರ ಸಂಘಟನೆಗಳಿಗೆ ಪಾಕಿಸ್ಥಾನ ಸೇನೆ ಹಾಗೂ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ತರಬೇತಿ ನೀಡಿದ್ದವು ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಅಮೆರಿಕ ಪ್ರವಾಸದಲ್ಲಿರುವ ಅವರು ನ್ಯೂಯಾರ್ಕ್‌ನಲ್ಲಿ ಮಾತನಾಡಿ, “80ರ ದಶಕದಲ್ಲಿ ಅಫ್ಘಾನಿಸ್ಥಾನದಲ್ಲಿ ಸೋವಿಯತ್‌ ಪಡೆಗಳ ವಿರುದ್ಧ ಹೋರಾಡಲು ಮುಜಾಹಿದೀನ್‌, ಅಲ್‌ ಕಾಯಿದಾದಂಥ ಸಂಘಟನೆಗಳಿಗೆ ತರಬೇತಿ ನೀಡಲಾಗಿತ್ತು’ ಎಂದಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಚಾರವಾಗಿದ್ದರೂ ಪಾಕಿಸ್ಥಾನದ ರಾಜಕೀಯ ನಾಯಕರೊಬ್ಬರು ಜಗತ್ತಿನ ಮುಂದೆ ಅದನ್ನು ಒಪ್ಪಿಕೊಂಡಿರುವುದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next