Advertisement

ಮೋದಿ ರೈತ ವಿರೋಧಿ: ಟೀಕೆ

03:50 AM Feb 07, 2017 | Team Udayavani |

ಹೊಸದಿಲ್ಲಿ/ಇಂಫಾಲ: ಪ್ರಧಾನಿ ನರೇಂದ್ರ ಮೋದಿ ಅವರ ಸ್ಕ್ಯಾಮ್‌ ವಿಶ್ಲೇಷಣೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಸಿಎಂ ಅಖೀಲೇಶ್‌ ಯಾದವ್‌ ಇಬ್ಬರ ನಿದ್ದೆಗೆಡಿಸಿದ್ದು, ಎಸ್ಪಿ- ಕೈ ಪ್ರಚಾರದಲ್ಲಿ ಸಂಪೂರ್ಣ ಮೋದಿ ವಿರುದ್ಧ ವಾಕ್ಸಮರ ಸಾಗಿದೆ. ಸೋಮವಾರದ ರ್ಯಾಲಿಯಲ್ಲಿ ರಾಹುಲ್‌, ಮೋದಿ ಅವರಿಗೆ “ರೈತ ವಿರೋಧಿ’ ಪಟ್ಟ ಕೊಟ್ಟಿದ್ದಾರೆ.

Advertisement

“ನರೇಂದ್ರ ಮೋದಿ ಅವರಿಗೆ 50 ಶ್ರೀಮಂತರ ಸಾಲ ಮನ್ನಾ ಮಾಡಲು ಗೊತ್ತಿದೆ. ಆದರೆ, ಸಾಲದ ಬಾಧೆಯಲ್ಲಿರುವ ರೈತರ ಕಣ್ಣೀರೊರೆಸಲು ಅವರಿಗೆ ಪುರುಸೊತ್ತೇ ಇಲ್ಲ. 2014ರ ಲೋಕಸಭಾ ಚುನಾವಣೆಯ ಭರವಸೆಗಳನ್ನು ಬಿಜೆಪಿ ಸಂಪೂರ್ಣವಾಗಿ ಮರೆತಿದೆ. ಕೇಂದ್ರದಲ್ಲಿ ಎನ್‌ಡಿಎ ಸರಕಾರ ಸಂಪೂರ್ಣ ವಿಫ‌ಲವಾಗಿದೆ’ ಎಂದು ಎಸ್ಪಿ- ಕಾಂಗ್ರೆಸ್‌ ಚುನಾವಣಾ ರ್ಯಾಲಿಯಲ್ಲಿ ಆರೋಪಿಸಿದ್ದಾರೆ.

ಶಹಬ್ಟಾಶ್‌ ಅಖೀಲೇಶ್‌: ಉತ್ತರಪ್ರದೇಶದಲ್ಲಿ ಅಖೀಲೇಶ್‌ ಯಾದವ್‌ ಸಿಎಂ ಆಗಿ ಮಾಡಿರುವ ಯೋಜನೆಗಳನ್ನು ಕೊಂಡಾಡಿದ ರಾಹುಲ್‌, “ಅಖೀಲೇಶ್‌ಗೆ ಬಡವರ, ರೈತರ ನೋವು ಗೊತ್ತು. ಅದಕ್ಕಾಗಿ ಅವರು ರಾಜ್ಯಕ್ಕೆ ಬೆಳಕಾಗುವಂಥ ಯೋಜನೆಗಳನ್ನು ತಂದರು. ಎಸ್ಪಿ- ಕಾಂಗ್ರೆಸ್‌ ಮೈತ್ರಿಯಿಂದ ಸರಕಾರ ರಚನೆಗೊಂಡರೆ ಉತ್ತರಪ್ರದೇಶ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಕಾಣಲಿದೆ’ ಎಂದರು.  

ಸೈಕಲ್‌ ಓಡೊಕೆ ಗೊತ್ತು!: ರ್ಯಾಲಿಯಲ್ಲಿ ಸಿಎಂ ಅಖೀಲೇಶ್‌ ಮಾತನಾಡಿ, “ಬಿಜೆಪಿಯ ಪ್ರವಾಹದ ವಿರುದ್ಧ ಸೈಕಲ್‌ ಓಡಿಸಲು ಸಮಾಜವಾದಿಗಳಿಗೆ ತಿಳಿದಿದೆ. ಕಪ್ಪು- ಬಿಳುಪು ಹೆಸರಿನಲ್ಲಿ ಬಿಜೆಪಿ ಜನರ ಎಲ್ಲ ಹಣವನ್ನೂ ಬ್ಯಾಂಕಿಗೆ ಜಮಾಯಿಸಿದೆ. ಇದರಿಂದ ಬ್ಯಾಂಕುಗಳಿಗೆ ಲಾಭ ಬಿಟ್ಟರೆ, ಬಡವರಿಗೆ ನಯಾಪೈಸೆ ಲಾಭವಿಲ್ಲ. ದೇಶದ ಜನರು ಬಿಜೆಪಿಯನ್ನು ಆರಿಸಿ, ಕ್ಯೂನಲ್ಲಿ ನಿಂತು ಬಸವಳಿದಿದ್ದಾರೆ. ಆದರೆ, ಕ್ಯೂನಲ್ಲಿ ನಿಂತು ಸುಸ್ತಾಗುವ ಪರಿಸ್ಥಿತಿ ಬಿಜೆಪಿಯವರಿಗೆ ಎದುರಾಗಿಲ್ಲ’ ಎಂದರು.

“ಉತ್ತರ ಪ್ರದೇಶವನ್ನು ಬಿಜೆಪಿ ಗೂಂಡಾ ರಾಜ್ಯ ಎಂದು ಬಿಂಬಿಸುತ್ತಿದೆ. ಇಲ್ಲಿ ಅಪರಾಧಗಳು ಕಡಿಮೆ ಆಗಿರುವುದು ಅವರಿಗೆ ತಿಳಿದೇ ಇಲ್ಲ. ಒಂದು ಮಾಹಿತಿಯಂತೆ, ಈಗಿನ ಭಾರತದಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ನಂ.1,2,3 ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರವನ್ನು ಅನುಭವಿಸುತ್ತಿದೆ’ ಎಂದು ಆರೋಪಿಸಿದರು.

Advertisement

ಮುಲಾಯಂ ಯೂಟರ್ನ್: ಕೆಲ ದಿನಗಳ ಹಿಂದಷ್ಟೇ ಸಮಾಜವಾದಿ ಪಕ್ಷದ ಪರ  ಪ್ರಚಾರ ನಡೆಸುವುದಿಲ್ಲ ಎಂದಿದ್ದ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ಈಗ ಪ್ರಚಾರ ನಡೆಸುವ ಮಾತಾಡಿದ್ದಾರೆ. “ನನ್ನ ಮತ್ತು ಅಖೀಲೇಶ್‌ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮುಂದಿನ ಸಿಎಂ ಅಖೀಲೇಶ್‌ ಆಗಲು ನನ್ನಿಂದ ಯಾವುದೇ ತಕರಾರಿಲ್ಲ. ಪಕ್ಷದಲ್ಲಿ ಭಿನ್ನಮತವಿದೆ ಎನ್ನುವುದೆಲ್ಲ ಸುಳ್ಳು. ಸೋದರ ಶಿವಪಾಲ್‌ ಯಾದವ್‌ ಅವರನ್ನು ಸಮಾಜವಾದಿ ಪಕ್ಷದಲ್ಲಿ ಕಡೆಗಣಿಸಲಾಗಿದೆ ಎನ್ನುವುದೂ ಸತ್ಯಕ್ಕೆ ದೂರವಾದ ಮಾತು’ ಎನ್ನುವ ಮೂಲಕ ಪಕ್ಷದ ಒಡಕುಗಳಿಗೆ ಅವರು ತೇಪೆ ಹಚ್ಚಲೆತ್ನಿಸಿದರು.

ಮತ್ತೆ ರಾಮಜಪ: ಇನ್ನೊಂದೆಡೆ ಬಿಜೆಪಿಯ ಚುನಾವಣಾ ಪ್ರಚಾರಕರು ಶ್ರೀರಾಮನನ್ನೇ ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ಲಖನೌದಲ್ಲಿ ಪ್ರಚಾರ ವೇಳೆ, “ಅಯೋಧ್ಯೆ ಅಥವಾ ಭಾರತದಲ್ಲಿ ಅಲ್ಲದೆ ಅದನ್ನು ಇನ್ನೇನು ಪಾಕಿಸ್ಥಾನದಲ್ಲಿ ನಿರ್ಮಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ, ಮಣಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣವೂ ರಂಗೇರಿದ್ದು, ಸಿಎಂ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಓಕ್ರಾಮ್‌ ಇಬೋಬಿ ಸಿಂಗ್‌ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ಇರಾನ್‌ ಶರ್ಮಿಳಾ ತೌಬಾಲ್‌ ಕ್ಷೇತದಿಂದ ಸ್ಪರ್ಧಿಸಲಿದ್ದಾರೆ. 

ಎಸ್ಪಿ ಆಡಳಿತಾವಧಿಯಲ್ಲಿ ಉ.ಪ್ರ.ದಲ್ಲಿ 7,673 ಗಲಭೆ, 4,660 ಕೊಲೆ, 4096 ಲೂಟಿ, 260 ಡಕಾಯಿತ ಪ್ರಕರಣಗಳು ನಡೆದಿವೆ. ರಾಜ್ಯದ ದುಃಸ್ಥಿತಿಯನ್ನು ಅಂಕಿಅಂಶಗಳು ಹೇಳುವಾಗ ಸಿಎಂ ಅಖೀಲೇಶ್‌ಗೆ ಮತ ಯಾಚಿಸಲು ನಾಚಿಕೆ ಆಗುವುದಿಲ್ಲವೇ?
ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ,

Advertisement

Udayavani is now on Telegram. Click here to join our channel and stay updated with the latest news.

Next