ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಹಾಗೂ ಅವರು ಕೈಗೊಂಡ ಅಪನಗದೀಕರಣದ ದಿಟ್ಟ ನಿರ್ಧಾರಕ್ಕೆ ದೇಶದ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜನಾಂಗದ ಮನ್ನಣೆ ದೊರೆತಿದೆ. ಇದಕ್ಕೆ ಪಂಚರಾಜ್ಯಗಳ ಚುನಾವಣೆಗಳ ಫಲಿತಾಂಶದಲ್ಲಿ ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ಅಭೂತಪೂರ್ವ ಜಯವೇ ಸಾಕ್ಷಿಯೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶಶೆಟ್ಟರ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಜಾತಿ ಸಮೀಕರಣ ನಡೆಯುತ್ತಿತ್ತು. ಆದರೆ ಬಾರಿಉತ್ತರ ಪ್ರದೇಶದಲ್ಲಿ ಪಕ್ಷ ಹಾಗೂ ಜಾತಿಭೇದ ಮರೆತು ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಸರ್ವ ಜನಾಂಗದವರು ಪ್ರಧಾನಿಮೋದಿ ನಾಯಕತ್ವಕ್ಕೆ ಮನ್ನಣೆ ಕೊಟ್ಟು ಬಿಜೆಪಿಗೆ ಮತ ಚಲಾಯಿಸಿದ್ದಾರೆ.
ಉತ್ತರ ಪ್ರದೇಶ ದೇಶದಲ್ಲೇ ದೊಡ್ಡ ರಾಜ್ಯವಾಗಿದೆ. ಅದರ ಇತಿಹಾಸದಲ್ಲೇ ಯಾವ ಪಕ್ಷವೂ ಅತೀ ದೊಡ್ಡಪಕ್ಷವಾಗಿ ಹೊರ ಹೊಮ್ಮಿರಲಿಲ್ಲ.ಆದರೆ ಈ ಬಾರಿ ಅಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇಡೀ ದೇಶದ ದಿಕ್ಸೂಚಿ ಫಲಿತಾಂಶ ಅದು ನೀಡಿದೆ. ಇದರ ಪರಿಣಾಮ ಕರ್ನಾಟಕ ಸೇರಿದಂತೆ ದೇಶದ ಇನ್ನಿತರೆ ರಾಜ್ಯಗಳ ರಾಜಕೀಯ ಧ್ರುವೀಕರಣದ ಮೇಲಾಗಲಿದೆ ಎಂದರು.
ಕಾಂಗ್ರೆಸ್‌ನವರು 50 ವರ್ಷ ಆಡಳಿತ ನಡೆಸಿ ದೇಶವನ್ನು ಲೂಟಿ ಮಾಡಿದ್ದಾರೆ. ಸಮರ್ಪಕವಾಗಿ ಆಡಳಿತ ಮಾಡಲಾಗದೆ ಬಡವರನ್ನು ಶೋಷಣೆ ಮಾಡುತ್ತಲೇ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖೀಲೇಶ ಯಾದವ ಆಡಳಿತಾವಧಿಯಲ್ಲಿ ಗೂಂಡಾಗಿರಿ,ದುರಾಡಳಿತ, ಅಭಿವೃದ್ಧಿ ಹಿನ್ನಡೆಯಾಗಿತ್ತು. ಅಲ್ಲದೆ ಕಾನೂನು-ಸುವ್ಯವಸ್ಥೆ ಹದಗೆಟ್ಟಿತ್ತು. ಅದಕ್ಕೆ ಜನ ಪರ್ಯಾಯ ಪಕ್ಷ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು ಎಂದರು.
ಅಯೋಧ್ಯಾ ಸಮಸ್ಯೆಯನ್ನು ಸರ್ವಾನುಮತದಿಂದ ನಿರ್ಣಯ ಕೈಗೊಂಡು, ಎಲ್ಲ ಜನಾಂಗದವರ ಅಭಿಪ್ರಾಯ ಪಡೆದು ಸೌಹಾರ್ದದಿಂದ ಬಗೆಹರಿಸಬೇಕು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಯೋಧ್ಯೆಯ ರಾಮಮಂದಿರ ವಿಷಯವನ್ನೇ ಪ್ರಸ್ತಾಪಿಸಿರಲಿಲ್ಲ. ಬದಲಾಗಿ ರಾಜ್ಯದ ಅಭಿವೃದ್ಧಿಯನ್ನಿಟ್ಟುಕೊಂಡು ಚುನಾವಣೆ ಎದುರಿಸಿತ್ತು. ಅದಕ್ಕೆ ಮತದಾರರಿಂದಲೂ ಮನ್ನಣೆ ಸಿಕ್ಕಿದೆ. ಈ ಬಾರಿ ಅಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಪಕ್ಷದಿಂದ ಟಿಕೆಟ್ ಕೊಟ್ಟಿರಲಿಲ್ಲ.
ಈ ಬಗ್ಗೆ ಮನವರಿಕೆ ಮಾಡಿಕೊಂಡು ಮುಂದಿನ ಬಾರಿಯಾದರೂ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಯೋಚಿಸಲಾಗುವುದು ಎಂದರು. ಗೋವಾದಲ್ಲಿ ಪಕ್ಷ ಮನೋಹರ ಪರಿಕರ್ ನಾಯಕತ್ವ ಬದಲಿಸಿ ಲಕ್ಷ್ಮೀಕಾಂತ ಪಾರ್ಶೇಕರ ಅವರಿಗೆ ಕೊಟ್ಟಿದ್ದಕ್ಕೆ ಅಲ್ಲಿಯ ಜನ ಅವರಿಗೆ ಮನ್ನಣೆ ನೀಡಲಿಲ್ಲ. ಇದರಿಂದ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಯಿತು. ಪಂಜಾಬ್‌ನಲ್ಲಿ ಅಕಾಲಿ ದಳ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಹಾಗೂ ಸ್ಥಳೀಯವಾಗಿ ಕೆಲವು ಸಮಸ್ಯೆಗಳು ಇದ್ದಿದ್ದರಿಂದ ಆಡಳಿತರೂಢ ಪಕ್ಷದ ಅಂಗಪಕ್ಷವಾಗಿದ್ದ ಬಿಜೆಪಿಗೂ ಸ್ವಲ್ಪ ಹಿನ್ನಡೆಯಾಯಿತು ಎಂದು ಶೆಟ್ಟರ ಹೇಳಿದರು.