ಬೆಳಗಾವಿ: ‘ಚಹ ಮಾರಿ, ಕಷ್ಟಪಟ್ಟು ಜೀವನ ಸಾಗಿಸಿ, ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ದೇಶದ ಪ್ರಧಾನಿ ಆಗಿರುವ ಮೋದಿ ಅವರು ಸ್ವಂತ ಕ್ಕಾಗಿ ಬದುಕದೆ ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮೋದಿ ಯನ್ನು ಹೊಗಳಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಬುಧವಾರ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಸ್ವಾರ್ಥ ಹೆಚ್ಚಾಗುತ್ತ ಹೋಗುತ್ತಿದೆ. ಇದನ್ನು ನಿವಾರಿಸಿಕೊಳ್ಳಬೇಕಾಗಿದೆ. ಮೋದಿ ಅವರ ಹಾಗೆಯೇ ವಿದ್ಯಾರ್ಥಿಗಳು ನಿಸ್ವಾರ್ಥರಾಗಬೇಕು. ದೇಶ ಮೊದಲು ಎಂಬ ಅಜೆಂಡಾ ಅವರದು. ಹೀಗಾಗಿ, ಜನರೂ ಒಪ್ಪಿಕೊಂಡು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಿದ್ದಾರೆ. ಅಹಂಕಾರಿ ಗಳಿಗೆ ಉಳಿಗಾಲ ಇಲ್ಲ. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಮೋದಿ ತಮ್ಮ ತಾಯಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವ ರೀತಿಯಲ್ಲಿಯೇ ವಿದ್ಯಾರ್ಥಿಗಳು ಕೂಡ ತಂದೆ-ತಾಯಿ, ಗುರು-ಹಿರಿಯರ ಆಶೀರ್ವಾದ ಪಡೆದು ಮುಂದೆ ಸಾಗಬೇಕು’ ಎಂದು ಸಚಿವರು ಕಿವಿಮಾತು ಹೇಳಿದರು.
ಬಳಿಕ ಮಾಧ್ಯಮದವರ ಜತೆ ಮಾತನಾಡಿ, ‘ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಲ್ಲರ ಮನ ಗೆದ್ದ ಮೋದಿ ಅವರನ್ನು ಜನ ಬೆಂಬಲಿಸಿದ್ದಾರೆ. ಯಾರ ಮೇಲೂ ಮೋದಿ ವೈರತ್ವ ಸಾಧಿಸುವುದಿಲ್ಲ. ದ್ವೇಷ ಬಯಸದ ವ್ಯಕ್ತಿ ಮೋದಿ. ಮೋದಿಯವರು ಯಾವುದೇ ಕಾರಣಕ್ಕೂ ಯಾವ ರಾಜ್ಯ ಸರ್ಕಾರವನ್ನೂ ಛಿದ್ರ ಮಾಡುವುದಾಗಲಿ ಅಥವಾ ಬೀಳಿಸುವುದಾಗಲಿ ಮಾಡುವುದಿಲ್ಲ. ಅಷ್ಟೊಂದು ವಿಶ್ವಾಸ ನಮಗಿದೆ’ ಎಂದು ಮೋದಿಯನ್ನು ಕೊಂಡಾಡಿದರು.
ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ
‘ಸಮ್ಮಿಶ್ರ ಸರ್ಕಾರ ಪತನದ ಸಂದರ್ಭ ಬಂದರೆ ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ’ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನದಿಂದ ಬೇರೆ ಪಕ್ಷಕ್ಕೆ ಹೋಗುವವರನ್ನು ತಡೆಯುವ ಪ್ರಯತ್ನ ನಡೆದಿದೆ. ಈಗಾಗಲೇ ಒಂದು ಹಂತದ ಸಭೆ ಮುಗಿದಿದೆ. ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವವರು ಕೊಡಬಹುದು. ಒತ್ತಾಯಪೂರ್ವಕವಾಗಿ ಯಾವುದೇ ಸಚಿವರ ರಾಜೀನಾಮೆ ಪಡೆಯುತ್ತಿಲ್ಲ. ಸರ್ಕಾರಕ್ಕೆ ಪತನ ಸ್ಥಿತಿ ಎದುರಾದರೆ ನಾನು ತ್ಯಾಗಕ್ಕೆ ಸಿದ್ಧ. ಉಭಯ ಪಕ್ಷದವರು ಈಗ ಒಗ್ಗಟ್ಟಾಗಿದ್ದಾರೆ. ಈ ಒಗ್ಗಟ್ಟು ಚುನಾವಣೆ ಪೂರ್ವದಲ್ಲಿಯೇ ಇದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದರು. ‘ನಾನು ಯಾವತ್ತೂ ಅನ್ಯ ಪಕ್ಷದವರನ್ನು ಟೀಕೆ ಮಾಡಿಲ್ಲ. ಬಿಜೆಪಿಯಲ್ಲಿ ಐದು ವರ್ಷ ಇದ್ದರೂ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರನ್ನು ಟೀಕೆ ಮಾಡಿಲ್ಲ. ಈಗ ಜೆಡಿಎಸ್‌ನಲ್ಲಿದ್ದರೂ ಮೋದಿ ಅವರ ಕೆಲಸವನ್ನು ಮೆಚ್ಚಿ ಹೊಗಳುತ್ತಿದ್ದೇನೆ. ಮೋದಿಯನ್ನು ಹೊಗಳುವುದು ಎಂದರೆ ಬಿಜೆಪಿಗೆ ಹೋಗುತ್ತೇನೆ ಎಂಬುದಲ್ಲ’ ಎಂದು ಸ್ಪಷ್ಟಪಡಿಸಿದರು.