ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರುವಂತೆ ಆಶೀರ್ವದಿಸಲಿದ್ದಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:Lok sabha election; ದೇಶದಲ್ಲಿ ಕಾಂಗ್ರೆಸ್ ಇಪ್ಪತ್ತು ಸ್ಥಾನ ಗೆಲ್ಲುವುದಿಲ್ಲ: ಸಿ.ಟಿ ರವಿ
ಗುರುವಾರ (ಫೆ.01) ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಟ್ಟುನಿಟ್ಟಿನ ನೀತಿ ಮತ್ತು ಅಭಿವೃದ್ಧಿ ಕಾರ್ಯವನ್ನು ಪರಿಗಣಿಸಿ ಜನರು ಮೂರನೇ ಬಾರಿಯೂ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ ಎಂಬ ವಿಶ್ವಾಸ ಇದ್ದಿರುವುದಾಗಿ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ನವಭಾರತದಲ್ಲಿ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಉಜ್ವಲ ಭವಿಷ್ಯ ಇದೆ ಎಂಬ ವಿಶ್ವಾಸ ಇದೆ. ನಮ್ಮ ಸರ್ಕಾರದ ಅತ್ಯದ್ಭುತ ಅಭಿವೃದ್ಧಿ ಕಾರ್ಯವನ್ನು ಪರಿಗಣಿಸಿ ಜನರು ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಲಿದ್ದಾರೆ ಎಂಬ ನಿರೀಕ್ಷೆ ನಮ್ಮದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಸರ್ಕಾರದ ಅತ್ಯದ್ಭುತ ಕಾರ್ಯಸಾಧನೆಯಿಂದಾಗಿ ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ದೇಶದ ಅಭಿವೃದ್ಧಿ ಪಥವನ್ನು ಮುಂದುವರಿಸಲಿದ್ದು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೇಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.
ಇದು ಚುನಾವಣಾ ಪೂರ್ವದ ಮಧ್ಯಂತರ ಬಜೆಟ್ ಆಗಿದ್ದು, ಸರ್ಕಾರ ಜುಲೈನಲ್ಲಿ ವಿಕಾಸ್ ಭಾರತದ ದೃಷ್ಠಿಕೋನದಡಿ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.