ಹೊಸದಿಲ್ಲಿ : ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನವೇ ಘೋಷಿತ ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಅವರನ್ನು ದೇಶಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ ಪ್ರಯತ್ನವನ್ನು ತೀವ್ರಗೊಳಿಸಿದೆ.
ವಿಜಯ್ ಮಲ್ಯ ಅವರನ್ನು ಬ್ರಿಟನ್‌ನಿಂದ ಭಾರತಕ್ಕೆ ಬೇಗನೆ ಗಡೀಪಾರು ಮಾಡಿಸಿಕೊಳ್ಳುವ ದಿಶೆಯಲ್ಲಿ ಮೋದಿ ಸರಕಾರ ರಾಜತಾಂತ್ರಿಕ ಮಾರ್ಗಗಳನ್ನು ಪರಿಣಾಮಕಾರಿ ಬಳಸಿಕೊಳ್ಳುವಲ್ಲಿ ನಿರತವಾಗಿದೆ ಎಂದು ಮೂಲಗಳು ಹೇಳಿವೆ.
ಎಸ್‌ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಕೂಟಕ್ಕೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ಮದ್ಯ ದೊರೆ ಮಲ್ಯ ಅವರನ್ನು ಮುಂಬಯಿಯ ವಿಶೇಷ ಪಿಎಂಎಲ್‌ಎ ಕೋರ್ಟ್ ಕಳೆದ ಜನವರಿ 5ರಂದು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು.
ಇದನ್ನು ಅನುಸರಿಸಿ ಭಾರತೀಯ ಜನತಾ ಪಕ್ಷ, ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಸರಕಾರದ ಕಿರೀಟವನ್ನು ಏರಿರುವ ಹೊಸ ಗರಿ ಇದಾಗಿದೆ ಎಂದು ಹೇಳಿಕೊಂಡಿತ್ತು.
ವಿಜಯ್ ಮಲ್ಯ ಅವರಿಗೆ ಹಿಂದಿನ ಕಾಂಗ್ರೆಸ್ ಸರಕಾರ ಪಾಲನೆ, ಪೋಷಣೆ, ಬೆಂಬಲ ಇತ್ತು. ಆತ ದೀವಾಳಿ ಎದ್ದಿದ್ದರೂ ಆತನಿಗೆ ಹಿಂದಿನ ಕಾಂಗ್ರೆಸ್ ಸರಕಾರ ಕೇಳಿದಷ್ಟು ಕೋಟಿ ರೂ. ಸಾಲ ನೀಡಿತ್ತು. ಅದಾಗಿ ಆತ ಭಾರತೀಯ ಬ್ಯಾಂಕ್ ಕೂಟಗಳಿಗೆ 9,000 ಕೋಟಿ ರೂ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದರು.