ಹೊಸದಿಲ್ಲಿ : ಆಳುವ ಬಿಜೆಪಿ ಗೇಮ್ ಚೇಂಜರ್ ಅಲ್ಲ; ಕೇವಲ ನೇಮ್ ಚೇಂಜರ್ ಎಂದು ರಾಜ್ಯಸಭೆಯಲ್ಲಿಂದು ಕಾಂಗ್ರೆಸ್ ಲೇವಡಿ ಮಾಡಿತು.
ರಾಜ್ಯಸಭೆಯಲ್ಲಿಂದು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾಡಿದ ಚೊಚ್ಚಲ ಭಾಷಣದಿಂದ ಕೆರಳಿದ ಕಾಂಗ್ರೆಸ್ ಈ ರೀತಿಯಾಗಿ ಆಳುವ ಬಿಜೆಪಿಗೆ ತಿರುಗೇಟು ನೀಡಿತು.
1985ರ ಬಳಿಕ ಕಾಂಗ್ರೆಸ್ ಪಕ್ಷ ಯುಪಿಎ ಆಡಳಿತೆಯಲ್ಲಿ ಯಾವೆಲ್ಲ ಹೆಸರಿನಿಂದ ಯೋಜನೆಗಳನ್ನು ಜಾರಿಗೆ ತಂದಿತ್ತೋ ಆಳುವ ಎನ್‌ಡಿಎ ಸರಕಾರ ಅವುಗಳ ಹೆಸರನ್ನು ಮಾತ್ರವೇ ಬದಲಿಸಿದೆ. ಆದುದರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಗೇಮ್ ಚೇಂಜರ್ ಅಲ್ಲ; ಕೇವಲ ನೇಮ್ ಚೇಂಜರ್ ಆಗಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಅವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳುವ ವೇಳೆ ಹೇಳಿದರು.
ತ್ರಿವಳಿ ತಲಾಕ್ ಬಗ್ಗೆ ಪ್ರತಿಕ್ರಿಯಿಸಿದ ಆಜಾದ್, “ಶಿಯಾ ಮತ್ತು ಸುನ್ನಿಗಳನ್ನು ವಿಭಜಿಸಿದ ಬಳಿಕ ನೀವೀಗ ಮುಸ್ಲಿಂ ಪತಿ – ಪತ್ನಿಯರನ್ನು ವಿಭಜಸುತ್ತಿದ್ದೀರಿ. ಕಾಂಗ್ರೆಸ್ ಪಕ್ಷ ತ್ರಿವಳಿ ತಲಾಕ್ ವಿರೋಧಿಸುತ್ತದೆ; ಆದರೆ ಅದರ ಅಪರಾಧೀಕರಣವನ್ನು ಬೆಂಬಲಿಸುವುದಿಲ್ಲ’ ಎಂದು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ಪಿ ಚಿದಂಬರಂ ಮಾಡಿದ್ದ ಪಕೋಡ ಟೀಕಗೆ ಉತ್ತರಿಸಿದ ಅಮಿತ್ ಶಾ, ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡ ಮಾರುವುದೇ ಲೇಸು ಎಂದು ಹೇಳಿದರು. ಪ್ರಧಾನಿ ಮೋದಿ ಅವರು ಪಕೋಡ ಮಾರುವ ವ್ಯಕ್ತಿ ಉದ್ಯೋಗಿಯಾಗಿದ್ದಾನೆ ಎಂದು ಹೇಳಿದ್ದರು.
“ಪಕೋಡ ಮಾರುವುದು ಅವಮಾನಕಾರಿಯಲ್ಲ; ಆದರೆ ಪಕೋಡ ಮಾರುವವನ್ನು ಭಿಕ್ಷುಕನಂತೆ ಕಾಣುವುದು ನಾಚಿಕೆಗೇಡಿನ ಸಂಗತಿ. ಚಾಯ್‌ವಾಲಾ ವ್ಯಕ್ತಿಯೊಬ್ಬ ಇಂದು ಭಾರತದ ಪ್ರಧಾನಿಯಾಗಿರುವುದು ವಿಶ್ವಕ್ಕೇ ಹೆಮ್ಮೆಯ ವಿಷಯವಾಗಿದೆ’ ಎಂದು ಅಮಿತ್ ಶಾ ಹೇಳಿದರು.