ಹುಬ್ಬಳ್ಳಿ: ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ 3ನೇ ಹಂತದ 11 ಸೂತ್ರಗಳ ಕ್ರಮಗಳಲ್ಲಿ ದೇಶದ ಕೃಷಿ ಹಾಗೂ ಕೃಷಿ ಆಧಾರಿತ ವೃತ್ತಿಗಳ ಪ್ರೋತ್ಸಾಹಕ್ಕೆ ಹಾಗೂ ಮೂಲ ಸೌಕರ್ಯ ನಿರ್ಮಾಣಕ್ಕೆ ಒಂದು ಲಕ್ಷ ಕೋಟಿ ರೂ.ಅನುದಾನ ಘೋಷಿಸಿ ಮೋದಿ ಸರ್ಕಾರ ದೇಶದ ಅನ್ನದಾತನ ಬೆನ್ನಿಗೆ ನಿಂತಿದೆಎನ್ನುವುದನ್ನು ಪುನರುತ್ಛರಿಸಿದ್ದಾರೆ ಸಚಿವ ಪ್ರಲ್ಹಾದ ಜೋಶಿ.
ದೇಶ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ದಾಖಲೆ ಆಹಾರ ಧಾನ್ಯ ಉತ್ಪಾದನೆ ಮಾಡಿ ತೋರಿಸಿದೆ. ಹೀಗಾಗಿ ದೇಶದ ಕೃಷಿ ಚಟುವಟಿಕೆಗಳು ಮತ್ತು ಗ್ರಾಮೀಣಾಭಿವೃದ್ಧಿಗೆ ಭದ್ರ ಬುನಾದಿ ಹಾಕುವತ್ತ ಸಚಿವರು ಘೋಷಿಸಿದ ಹಲವಾರು ಕ್ರಮಗಳು ಸಹಕಾರಿಯಾಗಲಿವೆ.
ಒಂದು ಲಕ್ಷ ಕೋಟಿ ರೂ. ಅನುದಾನದಲ್ಲಿ ಆಹಾರ ಸಂಸ್ಕರಣಗಳ ಸಂಕೀರ್ಣಗಳ ವ್ಯವಸ್ಥೆಗೆ 10 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಎರಡು ಲಕ್ಷ ಸಂಸ್ಕರಣ ಘಟಕಗಳಿಗೆ ಅನುಕೂಲವಾಗಲಿದೆ.
ರೈತರ ಉತ್ಪನ್ನ ಸಂರಕ್ಷಿಸಲು ಗೋದಾಮು, ಶೈತ್ಯಾಗಾರ ನಿರ್ಮಾಣ, ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಬೆಳೆದ ರೈತರ ಉತ್ಪನ್ನ ಸಾಗಾಟದಲ್ಲಿ ಶೇ.50 ಸಬ್ಸಿಡಿಗಾಗಿ 500 ಕೋಟಿ ರೂ., ಔಷಧಿ ಹಾಗೂ ಗಿಡಮೂಲಿಕೆ ಬೆಳೆಯುವ ರೈತರಿಗಾಗಿ ವಿಶೇಷ ಪ್ರೋತ್ಸಾಹಕ್ಕೆ ನಾಲ್ಕು ಸಾವಿರ ಕೋಟಿ ರೂ., ಗಂಗಾ ನದಿ ದಂಡೆಯಮೇಲೆ 800 ಹೆಕ್ಟೇರ್ ಔಷಧಿ ಗಿಡಮೂಲಿಕೆಗಳ ಕಾರಿಡಾರ್ ಯೋಜನೆ, ಇದರಿಂದ 25 ಲಕ್ಷ ಎಕರೆ ಪ್ರದೇಶದಲ್ಲಿ ಔಷಧಿ ಸಸ್ಯ ಬೆಳೆಸಲು ರೈತರಿಗೆ ಪ್ರೋತ್ಸಾಹ, ಜಾನುವಾರುಗಳ ಸಂರಕ್ಷಣೆಗಾಗಿ ದೇಶದ ಎಲ್ಲ ಜಾನುವಾರುಗಳಿಗೆ ರೋಗನಿರೋಧಕ ಲಸಿಕೆ ಹಾಕುವ ಯೋಜನೆ, ಜೇನು ಕೃಷಿ ಮಾಡುವ ರೈತರಿಗೆ 500 ಕೋಟಿ ರೂ.ಗಳ ವಿಶೇಷ ಯೋಜನೆ. ಒಟ್ಟಾರೆ ದೇಶದ ಕೃಷಿ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಳಾಗಿವೆ. ಇವೆಲ್ಲ ಸ್ವಾವಲಂಬಿ ಕೃಷಿ ಭಾರತ ನಿರ್ಮಾಣಕ್ಕೆ ರಾಜಮಾರ್ಗದಂತಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ದೇಶದ ಮೀನುಗಾರರಿಗೆ ಹಾಗೂ ಮತ್ಸೋದ್ಯಮ ಪ್ರೋತ್ಸಾಹಕ್ಕೆ 20 ಸಾವಿರ ಕೋಟಿ ರೂ. ವಿಶೇಷ ಅನುದಾನ ಮಹತ್ವದ್ದಾಗಿದೆ. ಇದರೊಂದಿಗೆ ದೇಶದ ಕೃಷಿಕರಿಗೆ ಕಾನೂನಾತ್ಮಕ ರಕ್ಷಾ ಕವಚ ನೀಡುವ ಉದ್ದೇಶದಿಂದ ಹಾಗೂ ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ ಹೆಚ್ಚುಗೊಳಿಸುವಲ್ಲಿ ಅನುಕೂಲವಾಗಲು 1955ರ ಅಗತ್ಯ ವಸ್ತುಗಳ ಕಾನೂನಿಗೆ ತಿದ್ದುಪಡಿ ತರುವ ನಿರ್ಧಾರವೂ ಕೃಷಿ ಸ್ವಾವಲಂಬಿ ಭಾರತಕ್ಕೆ ಹೆಚ್ಚು ಅನುಕೂಲಕರವಾಗಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.