ರಾಯಚೂರು: “ನನ್ನ ಎದುರು ಬಿಜೆಪಿ ಬಾವುಟ ಹಿಡಿದು ಮೋದಿ, ಮೋದಿ ಎಂದು ಕೂಗಿದರೆ ಏನು ಪ್ರಯೋಜನ? ನಿಮ್ಮ ಸಮಸ್ಯೆಗಳನ್ನು ಆಲಿಸಿ ನಾನೇ ಬಗೆಹರಿಸಬೇಕೇ ವಿನ: ಮೋದಿ ಬರುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.
ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮ ವಾಸ್ತವ್ಯ, ಜನತಾ ದರ್ಶನ ಹಾಗೂ 8,144 ಲಕ್ಷ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
“ಬಿಜೆಪಿಯವರಂತೆ ನನಗೆ ನಾಟಕ ಮಾಡಲು ಬರುವುದಿಲ್ಲ. ನರೇಗಾದಡಿ ಕೇಂದ್ರದಿಂದ ಇನ್ನೂ ಎರಡು ಸಾವಿರ ಕೋಟಿ ರೂ.ಬಾಕಿ ಇದೆ. 1,200 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಪಾವತಿಸಿದೆ. ನಾನೇ ವಿಶೇಷ ರೈಲು ವ್ಯವಸ್ಥೆ ಮಾಡಿಕೊಡುತ್ತೇನೆ. ಯಡಿಯೂರಪ್ಪ ಸೇರಿ ಬಿಜೆಪಿಯವರು ದೆಹಲಿಗೆ ತೆರಳಿ ಮೊದಲು ಬಾಕಿ ಹಣ ಬಿಡುಗಡೆ ಮಾಡಿಸಲಿ’ ಎಂದು ತಾಕೀತು ಮಾಡಿದರು.
“ನನ್ನನ್ನು ಕೇವಲ ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳ ಮುಖ್ಯಮಂತ್ರಿ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ರಾಜ್ಯದ 30 ಜಿಲ್ಲೆಗಳ ಮುಖ್ಯಮಂತ್ರಿಯಾಗಿದ್ದು, ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ನನ್ನ ಆದ್ಯತೆಯಾಗಿದೆ. ನಾನು ಗ್ರಾಮ ವಾಸ್ತವ್ಯದ ಮೂಲಕ ನಿಮ್ಮ ಮುಂದೆ ನಾಟಕವಾಡಲು ಬಂದಿಲ್ಲ. ಖುದ್ದು ಅರ್ಜಿ ಸ್ವೀಕರಿಸಿ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬಂದಿದ್ದೇನೆ’ ಎಂದರು.
“ರೈತರು ಸಾಲಮನ್ನಾ ವಿಚಾರದಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳಬಾರದು. 2019-20ನೇ ಸಾಲಿನಲ್ಲಿ ಸಾಲಮನ್ನಾಕ್ಕೆಂದು 25 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದು, ಎಲ್ಲ ಅರ್ಹ ರೈತರ ಸಾಲಮನ್ನಾ ಆಗಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ 49,270, ಸಹಕಾರಿ ಬ್ಯಾಂಕ್‌ಗಳ 20,561 ಖಾತೆಗಳಿಗೆ ಹಣ ಪಾವತಿಯಾಗಿದೆ’ ಎಂದರು.
“ಆಂಧ್ರದಲ್ಲಿ ಐದು ವರ್ಷ ಆಡಳಿತ ನಡೆಸಿದ ಚಂದ್ರಬಾಬು ನಾಯ್ಡು ಕೇವಲ 14 ಸಾವಿರ ಕೋಟಿ ಮಾತ್ರ ಸಾಲಮನ್ನಾ ಮಾಡಿದ್ದಾರೆ. ನಾನು ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಾಲಮನ್ನಾ ಮಾಡಿದ್ದೇನೆ. ರೈತರು ಯಾವುದೇ ಕಾರಣಕ್ಕೂ ಮಾಧ್ಯಮಗಳ ಎದುರು ಹೋಗಿ ಸಾಲಮನ್ನಾದ ಬಗ್ಗೆ ವಿನಾಕಾರಣ ದೂರುವುದು ಬೇಡ.
ದಯವಿಟ್ಟು ನನ್ನ ಮತ್ತು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಡಿ. ಈ ವರ್ಷ ಸಾಲಮನ್ನಾ ಮಾಡಿರುವ ಕಾರಣ ಸರ್ಕಾರಕ್ಕೆ ಹಣದ ಹೊರೆಯಾಗಿದೆ. ಮುಂದಿನ ವರ್ಷ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದ್ದು, ವೃದ್ಧಾಪ್ಯ, ಅಂಗವಿಕಲರ ಮಾಸಾಶನವನ್ನು 2 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ಅದರ ಜತೆಗೆ ಇನ್ನೂ ಉತ್ತಮ ಯೋಜನೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.