Advertisement

ಪ್ರಧಾನಿ ಹುದ್ದೆಗೇ ಅಗೌರವ ತೋರಿದ ಮೋದಿ :ಸಿದ್ದರಾಮಯ್ಯ ಕಿಡಿ

01:39 PM Feb 05, 2018 | |

ಬೆಂಗಳೂರು: ‘ಪ್ರಧಾನಿಯವರು ಯಾವುದೇ ಆಧಾರಗಳಿಲ್ಲದೆ ಆರೋಪ ಮಾಡಿದ್ದು ಅವರು ಪ್ರಧಾನಿ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಅವರು ನರೇಂದ್ರ ಮೋದಿ ಅಲ್ಲ, ಪ್ರಧಾನಮಂತ್ರಿ ಎನ್ನುವುದು ತಿಳಿದಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ. 

Advertisement

ಪರಿವರ್ತನಾ ಯಾತ್ರೆಯ ಪ್ರಧಾನಿ ಮೋದಿ ಅವರ ಭಾಷಣಕ್ಕೆ ತಿರುಗೇಟು ನೀಡಲು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಹಲವು ಸಾಧನೆಗಳನ್ನು ಹೇಳಿಕೊಂಡರು. ನೀವಿನ್ನೂ ಯಾಕೆ ಲೋಕಪಾಲವನ್ನು ನೇಮಿಸಿಲ್ಲ ಎಂದು ಪ್ರಶ್ನಿಸುವ ಮೂಲಕ ಅವರ ಹಲವು ಆರೋಪಗಳಿಗೆ ಸಾಧನೆಗಳ ಅಂಕಿ -ಅಂಶಗಳ ಸಮೇತ ತಿರುಗೇಟು ನೀಡಿದರು. 

‘ಮೋದಿ ಅವರು ಓರ್ವ ಪ್ರಧಾನಿಯಾಗಿ  ಭಾಷಣ ಮಾಡಲಿಲ್ಲ. ಸುಳ್ಳಿನ ಕಂತೆ, ಆಧಾರ ರಹಿತ ,ಅತ್ಯಂತ ಬೇಜವಾಬ್ಧಾರಿ 
ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ಕಿಡಿ ಕಾರಿದರು. 

‘ಅವರ ಪಕ್ಕದಲ್ಲೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಯಡಿಯೂರಪ್ಪ, ಕಟ್ಟಾ  ಸುಬ್ರಹ್ಮಣ್ಯ  ಕೃಷ್ಣಯ್ಯ ಶೆಟ್ಟಿ ಇದ್ದರು ಅವರನ್ನು ಜೊತೆಯಲ್ಲಿ ಕೂರಿಸಿಕೊಂಡು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು’ ಎಂದು ಲೇವಡಿ ಮಾಡಿದರು. 

‘ನಮ್ಮ ಅವದಿಯಲ್ಲಿ  ಹಲವು ಸಾಧನೆಗಳಲ್ಲಿ ನಾವು ಮೊದಲಿಗರಾಗಿದ್ದೇವೆ. 207 ಪ್ರಶಸ್ತಿಗಳು ಸಾರಿಗೆ ಇಲಾಖೆಗೆ ನಮ್ಮ ಅವಧಿಯಲ್ಲಿ ಬಂದಿವೆ. ಯಾವ ರಾಜ್ಯಕ್ಕೆ ಬಂದಿವೆ’ ಎಂದು ಪ್ರಶ್ನಿಸಿದರು.

Advertisement

‘ನಮ್ಮ ಅವಧಿಯಲ್ಲಿ  ರೈತರ ಆದಾಯ 38 % ಹೆಚ್ಚಾಗಿದೆ  ನೀತಿ ಆಯೋಗವೇ ಹೇಳಿದೆ. ಯೂನಿವರ್ಸಲ್‌ ಹೆಲ್ತ್‌ ಸ್ಕೀಮ್‌ ನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.ಬರಗಾಲದಲ್ಲಿ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ವರ್ಗಾವಣೆ ಮಾಡಿದ ಮೊದಲ ರಾಜ್ಯ ನಮ್ಮದು’ ಎಂದರು.  

 ‘ಇಷ್ಟೆಲ್ಲಾ ಇದ್ದು, ಕಾನೂನು ಸುವ್ಯವಸ್ಥೆ ಇಲ್ಲಾ ಅಂತಾರಲ್ಲ  ಕಾನೂನು ಸುವ್ಯವಸ್ಥೆ ಹದಗೆಟ್ಟ  ಟಾಪ್‌ 10 ರಾಜ್ಯಗಳು ಯಾವುದು ಎಂದು ಪ್ರಧಾನಿ ಮೋದಿ ಅವರು ನೋಡಿಕೊಳ್ಳಲಿ. ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ ಹೇಳಿರುವ ಪ್ರಕಾರ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೆ ಮೊದಲ ಸ್ಥಾನಗಳಲ್ಲಿವೆ. ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ನಾವು 10 ನೇ ಸ್ಥಾನದಲ್ಲಿದ್ದೇವೆ’ಎಂದರು.

‘ಬಿಜೆಪಿ ಅಧಿಕಾರದಲ್ಲಿರುವಲ್ಲೆಲ್ಲಾ ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿ , ಪರಿಶಿಷ್ಠ ವರ್ಗದವರಿಗೆ ರಕ್ಷಣೆ ಇಲ್ಲ. ಮೋದಿ ಕಾಲದಲ್ಲಿ ಅಮಿತ್‌ ಶಾ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಜೈಲಿಗೆ ಯಾಕೆ ಹೋಗಿದ್ದರು, ಗಡಿಪಾರು ಯಾಕೆ ಆಗಿದ್ದರು. ಅದನ್ನೆಲ್ಲಾ  ಜನ ಮರೆತಿದ್ದಾರಾ ? ಕೊಲೆಯಲ್ಲಿ ಭಾಗಿಯಾದ ಅಮಿತ್‌ ಶಾ ಇವತ್ತು ರಾಷ್ಟ್ರಾಧ್ಯಂತ ತಿರುಗಾಡುತ್ತಿದ್ದಾರೆ. ಯಾರು ಲೂಟಿ ಹೊಡೆದು  ಜೈಲಿಗೆ ಹೊದವರು ನಿಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಕಿಡಿ ಕಾರಿದರು.

‘ಹಲವು ಸುಳ್ಳುಗಳನ್ನು ಹೇಳಿ ರಾಜ್ಯದ ಜನತೆಯನ್ನು ಅವಮಾನಿಸಿದ್ದಾರೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದರು. 

‘ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಾರೆ ಎಂದು ನೀರಿಕ್ಷೆ ಮಾಡಿದ್ದೆವು ಆದರೆ ನಿರಾಶರಾದೆವು’ ಎಂದರು. 

‘ನರೇಂದ್ರ ಮೋದಿ ಅವರಿಗೇ ಕೌಂಟ್‌ ಡೌನ್‌ ಶುರುವಾಗಿದೆ. ಮೊನ್ನೆ ರಾಜಸ್ಥಾನದಲ್ಲಿ ಏನಾಯಿತು ಎಂದು ಗೊತ್ತಲ್ಲ, ಅಲ್ಲೆಲ್ಲಾ ಕೌಂಟ್‌ಡೌನ್‌ ಶುರುವಾಗಿದೆ’ ಎಂದರು.

‘ಅಮಿತ್‌ ಶಾ ಬಂದು ರಾಜ್ಯದಲ್ಲಿ ಎಷ್ಟೇ ಕೋಮುಗಲಭೆ ಮಾಡಿಸಿದರೂ ಮತ್ತೆ ಅಧಿಕಾರಕ್ಕೆ ಬರುವುದು ನಾವೇ. ಜನ ತೀರ್ಮಾನಿಸಿ ಆಗಿದೆ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ಎಂದು. ನೂರಕ್ಕೆ ನೂರು ಅಧಿಕಾರಕ್ಕೆ ಬರುವುದು ನಾವೇ’ ಎಂದರು. 

‘ರಾಜ್ಯದಲ್ಲಿ ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎನ್ನುವುದು ಯಡಿಯೂರಪ್ಪ ಅವರ ಭ್ರಮೆ. ಜೈಲಿಗೆ ಹೋಗಿದ್ದವರನ್ನು ಜನರು ನಂಬುತ್ತಾರಾ’ ಎಂದು ಪ್ರಶ್ನಿಸಿದರು. 

ಅವರನ್ನೇ ಕೇಳಿ!
ರಮ್ಯಾ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ ‘ಅವರನ್ನೇ ಕೇಳಿ’ ಎಂದರು. ‘ವೈಯ್ಯಕ್ತಿಕ ವಾಗಿ ಯಾರನ್ನೂ ತೇಜೋವಧೆ ಮಾಡುವುದು ಸರಿಯಲ್ಲ. ಸಂವಿಧಾನದ ವಿರೋಧವಾಗಿ ಹೋಗಲು ನಾವು ಬಿಜೆಪಿಯಲ್ಲ’ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next