ಸೇಡಂ: ದಿಲ್ಲಿಯಿಂದ ಹಳ್ಳಿವರೆಗೂ ನನ್ನನ್ನು ಸೋಲಿಸಲು ತಂತ್ರ ಹೆಣೆಯಲಾಗುತ್ತಿದೆ. ಮೋದಿ ಹಾಗೂ ಮೋದಿ ಚೇಲಾಗಳಿಂದ ನನ್ನನ್ನು ಸೋಲಿಸುವುದು ಅಸಾಧ್ಯ, ನನ್ನ ಗೆಲುವು ಇಲ್ಲಿನ ಮತದಾರರ ಕೈಯಲ್ಲಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದರು.
ಪಟ್ಟಣದ ಕೆ.ಎನ್.ಝಡ್ ಫಂಕ್ಷನ್ ಹಾಲ್ ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಜನತೆ ನೀಡಿದ ಅಧಿಕಾರವನ್ನು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಬಳಸಿಕೊಂಡಿದ್ದೇನೆ. ಲೋಕಸಭೆಯಲ್ಲಿ ಶಕ್ತಿ ಮೀರಿ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸಕ್ಕೆ ಮತ ಕೇಳಲು ಬಂದಿದ್ದೇನೆ.
ಬಿಜೆಪಿಯವರು ತಾವು ದೇಶಪ್ರೇಮಿಗಳು ಎಂದು ಬೊಬ್ಬೆ ಹೊಡೆಯುತ್ತಾರೆ, ನಾವೇನು ದೇಶದ್ರೋಹಿಗಳಾ? ದೇಶದ ಮೇಲೆ ಬಿಜೆಪಿಗಿಂತಲೂ ಮೂರು ಪಟ್ಟು ಹೆಚ್ಚು ಪ್ರೇಮ ಕಾಂಗ್ರೆಸ್ ಗಿದೆ. ಇಂದಿರಾ ಗಾಂಧಿ , ರಾಜೀವ ಗಾಂಧಿ ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದರು.
ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಒಂದೂ ಕಪ್ಪು ಚುಕ್ಕೆ ಇಲ್ಲದ ಜನನಾಯಕರು. ಸರ್ಕಾರಿ ನೌಕರಿಯಲ್ಲಿದ್ದ ಉಮೇಶ ಜಾಧವ್ ಅವರನ್ನು ಕರೆತಂದು ಶಾಸಕರನ್ನಾಗಿ ಮಾಡಿದ್ದು ನಾವು, ಈಗ ಆಮಿಷಕ್ಕೆ ಒಳಗಾಗಿ ಪಕ್ಷ ತೊರೆದಿದ್ದಾರೆ.
ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ನಡೆಯುತ್ತಿದೆ. ಪ್ರಧಾನಿ ಮೋದಿ ಕೇವಲ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಮುಕ್ರಂಖಾನ್, ಭಾಗಣ್ಣಗೌಡ ಸಂಕನೂರ, ತಿಪ್ಪಣ್ಣಪ್ಪ ಕಮಕನೂರ, ಶಾಮರಾವ ಪ್ಯಾಟಿ, ಸತೀಶರೆಡ್ಡಿ ಪಾಟೀಲ ರಂಜೋಳ ಇನ್ನಿತರರು ಮಾತನಾಡಿದರು.
ವೇದಿಕೆಯಲ್ಲಿ ಮಹಾಂತಪ್ಪ ಸಂಗಾವಿ, ಬಸವರಾಜ ಭೀಮಳ್ಳಿ, ಚಂದ್ರಿಕಾ ಪರಮೇಶ್ವರ, ನಾಗೇಶ ಕಾಳಾ, ಜಿಂಜಾನಿ ಜಾಗಿರದಾರ, ಕೃಷ್ಣ ಕುಲಕರ್ಣಿ ಇನ್ನಿತರರು ಇದ್ದರು. ನಾಗೇಶ್ವರರಾವ ಮಾಲಿಪಾಟೀಲ ನಿರೂಪಿಸಿದರು, ಸಿದ್ಧು ಬಾನಾರ ಸ್ವಾಗತಿಸಿದರು.