ಕಲಬುರಗಿ: ಪ್ರಧಾನಿ ಮೋದಿ ಉಕ್ಕಿನ ಮನುಷ್ಯ ಭಾರತದ ಮೊದಲ ಉಪಪ್ರಧಾನಿ ವಲ್ಲಭಾಯಿ ಪಟೇಲ್ ಅವರೊಂದಿಗೆ ಸಮೀಕರಿಸಿದ್ದಾರೆ ಎಂದು ಶರಣ ಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿವಿಯ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಶ್ಲಾಘಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಪಕ್ಷದ ಉಸ್ತುವಾರಿ ಮುರಳೀಧರರಾವ್ ಅವರು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ಹಾಗೂ 370ನೇ ವಿ ಧಿ ರದ್ದುಪಡಿಸುವ ಕಾರಣ ಮತ್ತು ಅದರ ನಂತರದ ಪರಿಣಾಮಗಳನ್ನು ವಿವರಿಸಲು ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ನಡೆಸುತ್ತಿರುವ ಸಭೆಯಲ್ಲಿ ಅವರು ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದುಪಡಿಸಿರುವುದು ಉಕ್ಕಿನ ಮನುಷ್ಯ ಸರ್ದಾರ ವಲ್ಲಭಾಯಿ ಪಟೇಲ್ ಅವರು ಸ್ವಾತಂತ್ರ್ಯದ ನಂತರ ಸಂಸ್ಥಾನಗಳನ್ನು ಭಾರತದೊಂದಿಗೆ ಸಂಯೋಜಿಸಿದ್ದಾರೆ. ಈಗ ಇಡೀ ದೇಶವು ಸಂಪೂರ್ಣ ಸಂಯೋಜಿಸಲ್ಪಟ್ಟಿದೆ ಮತ್ತು ಪ್ರತಿಯೊಂದು ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಡಾ| ಅಪ್ಪ ಉಲ್ಲೇಖೀಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮಾತನಾಡಿ, 370ನೇ ವಿಧಿ ರದ್ದುಪಡಿಸುವ ಬಗ್ಗೆ ವಿರೋಧ ಗಳು ನಡೆಸುತ್ತಿರುವ ತಪ್ಪು ಮಾಹಿತಿ ಅಭಿಯಾನ ಎದುರಿಸಲು ಭಾರತೀಯ ಜನತಾ ಪಕ್ಷವು ದೇಶದ 400 ಆಯ್ದ ಜಿಲ್ಲೆಗಳಲ್ಲಿ ರಾಷ್ಟ್ರವ್ಯಾಪಿ ಅಭಿಯಾನ ಆಯೋಜಿಸುವ ನಿರ್ಧಾರ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿಂದು
ಅಭಿಯಾನ ನಡೆಸಲಾಯಿತು ಎಂದು ಹೇಳಿದರು. ಶರಣಬಸವೇಶ್ವರ ವಿವಿಯ ಕುಲಪತಿ ಡಾ| ನಿರಂಜನ್ ನಿಷ್ಠಿ ಮಾತನಾಡಿದರು.
ಸಂಸದ ಡಾ| ಉಮೇಶ್ ಜಾದವ್, ಶಾಸಕರಾದ ದತ್ತಾತ್ರೇಯ ಪಾಟೀಲ್, ಬಸವರಾಜ ಮತ್ತಿಮಡು, ಡಾ| ಅವಿನಾಶ್ ಜಾದವ್, ಮಾಜಿ ಶಾಸಕ ಶಶೀಲ್ ಜಿ. ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಇದ್ದರು. ಅನಿಲಕುಮಾರ ಬಿಡವೆ ವಂದಿಸಿದರು.