Advertisement

ತೊಗಲುಗೊಂಬೆಗೆ ಆಧುನಿಕತೆಯ ಹೊಡೆತ!

06:39 PM Sep 02, 2020 | Suhan S |

ಚಿಕ್ಕಮಗಳೂರು: ಆಧುನಿಕ ತಂತ್ರಜ್ಞಾನ, ಮೊಬೈಲ್‌, ಟಿ.ವಿ., ಕಂಪ್ಯೂಟರ್‌, ಇಂಟರ್‌ನೆಟ್‌ ಭರಾಟೆಯಲ್ಲಿ ಅನೇಕ ಜಾನಪದ ಕಲೆಗಳು  ಅವಸಾನದ ಹಾದಿ ಹಿಡಿದಿವೆ. ಕಲೆಯನ್ನೇ ನಂಬಿಕೊಂಡು ಜೀವನದ ಬಂಡಿ ಸಾಗಿಸುವ ಕಲೆಗಾರರ ಬದುಕು ಮುಳುಗುತ್ತಿರುವ ದೋಣಿಯಲ್ಲಿನ ಪ್ರಯಾಣದಂತಾಗಿದೆ.

Advertisement

ಇಂತಹ ಅವಸಾನದತ್ತ ಸಾಗುತ್ತಿರುವ ಜನಪದ ಕಲೆಗಳಲ್ಲಿ ತೊಗಲುಗೊಂಬೆ ನಾಟಕವೂ ಒಂದಾಗಿದೆ. ತೊಗಲುಗೊಂಬೆ ನಾಟಕವು ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಸಿಳ್ಳೇಕ್ಯಾತನ್‌ ಎಂಬ ಜನಾಂಗದವರ ಕುಲಕಸುಬು ಇದಾಗಿದೆ. ಹಿಂದೆ ತೊಗಲುಗೊಂಬೆ ನಾಟಕ ನಂಬಿಕೊಂಡು ಜೀವನ ನಡೆಸುತ್ತಿದ್ದ ಜನರಿಗೆ ಗ್ರಾಮದ ಮುಖಂಡರು ಒಂದೊಂದು ತಂಡಕ್ಕೆ ಒಂದಿಷ್ಟು ಗ್ರಾಮಗಳನ್ನು ಹಂಚುತ್ತಿದ್ದರು. ಸುಗ್ಗಿಯ ಸಮಯದಲ್ಲಿ ಗ್ರಾಮಗಳಿಗೆ ತೆರಳಿ ಮೂರು ಗಂಟೆಗಳ ಕಾಲ ತೊಗಲುಗೊಂಬೆ ನಾಟಕವಾಡಿ ಗ್ರಾಮಸ್ಥರು ನೀಡುತ್ತಿದ್ದ ದವಸಧಾನ್ಯ ಪಡೆದು ಜೀವನ ಸಾಗಿಸುತ್ತಿದ್ದರು ಎಂದು ತೊಗಲಗೊಂಬೆ ಕಲಾವಿದ ದೇವರಾಜ್‌ ತಿಳಿಸಿದರು.

ಹಿಂದಿನ ಕಾಲದಲ್ಲಿ ತೊಗಲಗೊಂಬೆ ನಾಟಕ ಕಲಾವಿದರು, ರಾಮಾಯಣ, ಮಹಾಭಾರತ, ಕುರುಕ್ಷೇತ್ರ, ಬಂಟನ ಕಾಳಗ, ಅಭಿಮನ್ಯು, ಸುಪ್ರೀತ ವಿಲಾಸ ಪೌರಾಣಿಕ ನಾಟಕಗಳನ್ನು ಗ್ರಾಮಗಳ ಜನರ ಒಪ್ಪಿಗೆಯ ಮೇರೆಗೆ ತೊಗಲುಗೊಂಬೆ ನಾಟಕವಾಡುತ್ತಿದ್ದರು. ಹಬ್ಬ, ಜಾತ್ರೆ, ಮಕ್ಕಳ ನಾಮಕರಣ, ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಸರ್ಗರಾಮಾಯಣ ಗೊಂಬೆ ನಾಟಕವಾಡುತ್ತಿದ್ದರು ಎಂದರು.

ಗೊಂಬೆ ನಾಟಕದಿಂದ ಊರಿಗೆ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಅಂದಿನ ಜನರದ್ದು. ರಾಮ, ಸೀತೆ, ಲಕ್ಷ್ಮಣ, ತತ್ವಾದರ್ಶಗಳನ್ನು ನಾಟಕದ ಮೂಲಕ ಜನತೆಗೆ ಮನದಟ್ಟು ಮಾಡಲಾಗುತ್ತಿತ್ತು. ಜೊತೆಗೆ ಹಾಸ್ಯದೃಶ್ಯ ಪ್ರದರ್ಶನದೊಂದಿಗೆ ಜನರಿಗೆ ಮನರಂಜನೆ ನೀಡಲಾಗುತ್ತಿತ್ತು. ನಾಟಕ ಮುಗಿದ ಮೇಲೆ ಗ್ರಾಮಸ್ಥರು ಒಂದಿಷ್ಟು ಹಣ, ದವಸ ಧಾನ್ಯಗಳನ್ನು ನೀಡುತ್ತಿದ್ದರು. ನಂತರ ಮುಂದಿನ ಗ್ರಾಮಕ್ಕೆ ತೆರಳುತ್ತಿದ್ದರು ಎಂದ ಅವರು, ಅಂದಿನ ಹಿರಿಯರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಯೋಚನೆ ಇರಲಿಲ್ಲ, ತಮ್ಮಲ್ಲಿರುವ ಕಲೆಯನ್ನು ಮಕ್ಕಳಿಗೆ ಧಾರೆ ಎರೆಯಬೇಕೆನ್ನುವುದು ಅವರ ಆಶಯವಾಗಿತ್ತು ಎಂದು ತಿಳಿಸಿದರು.

ಗ್ರಾಮೀಣ ಜನತೆಯ ಮನದಲ್ಲಿ ಹಾಸುಹೊಕ್ಕಾಗಿರುವ ತೊಗಲಗೊಂಬೆ ನಾಟಕ ಆಧುನಿಕ ಜಗತ್ತಿನ ಮೊಬೈಲ್‌, ಟಿ.ವಿ, ಕಂಪ್ಯೂಟರ್‌, ಇಂಟರ್‌ನೆಟ್‌ನಂತಹ ಆಧುನಿಕ ತಂತ್ರಜ್ಞಾನದ ಭರಾಟೆಯಿಂದ ಅವಸಾನದ ಅಂಚಿಗೆ ಸರಿಯುತ್ತಿರುವುದು ಬೇಸರದ ಸಂಗತಿ ಎಂದ ದೇವರಾಜ್‌, ಕಲೆಯನ್ನೇ ಕುಲಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇಂದು ಕೂಲಿ ಕೆಲಸ, ವ್ಯಾಪಾರದಂತಹ ಪರ್ಯಾಯ ಮಾರ್ಗವನ್ನು ತುಳಿದಿದ್ದಾರೆ ಎಂದರು.

Advertisement

ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರ, ಗಿಡ್ಡೇನಹಳ್ಳಿ, ಅಂಬಳೆ, ಕಡೂರು ತಾಲೂಕಿನ ಮಲ್ಲೇಶ್ವರ ಭಾಗದಲ್ಲಿ ಸುಮಾರು 150 ರಿಂದ 200 ಕುಟುಂಬಗಳು ತೊಗಲುಗೊಂಬೆ ನಾಟಕವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದರು. ಸಂಪಾದನೆ ಇಲ್ಲದೇ ಕಲೆಯಿಂದ ಹಿರಿಯರು ವಿಮುಖರಾಗುತ್ತಿದ್ದಾರೆ. ಯುವಕರು ಬೇರೆ ದುಡಿಮೆಯ ದಾರಿ ಹಿಡಿದಿದ್ದಾರೆ ಎಂದು ತಿಳಿಸಿದರು.

ತೊಗಲಗೊಂಬೆ ನಾಟಕ ಹಿಂದಿನ ಟೆಂಟ್‌ ಥಿಯೇಟರ್‌ಗೆ ಮೂಲ, ಆಧುನಿಕ ಕಾಲದಲ್ಲಿ ನೋಡುಗರ ಕೊರತೆಯಿಂದ ಜನಪದ ಕಲೆ ನಶಿಸುತ್ತಿದೆ. ನಶಿಸುತ್ತಿರುವ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಲು ಸರ್ಕಾರ ಜನಪದ ಕಲೆಯನ್ನು ಉಳಿಸಲು ಮುಂದಾಗಬೇಕು. ಕಲೆಯನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡವರ ನೆರವಿಗೆ ಸರ್ಕಾರ ಮುಂದಾಗಬೇಕು. ಯುವಕರಿಗೆ ತೊಗಲುಗೊಂಬೆ ಕಲೆ ತರಬೇತಿ ನೀಡಲು ಶಾಲೆಗಳನ್ನು ಆರಂಭಿಸಬೇಕು. ತರಬೇತಿ ನೀಡುವ ಗುರುಗಳಿಗೆ ಸಹಾಯಧನ ನೀಡಬೇಕು. ಕಲೆ ಇಲ್ಲಿಗೇ ನಿಂತು ಹೋಗದೆ ಪುನರುಜ್ಜೀವನಗೊಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿರೋದು ಮೂರೇ ತೊಗಲಗೊಂಬೆ ತಂಡ :  ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆಯ ಸಂಗೀತ ನಾಟಕ ವಿಭಾಗದಲ್ಲಿ ರಾಜ್ಯದ ಮೂರು ತೊಗಲುಗೊಂಬೆ ನಾಟಕ ತಂಡ ರಿಜಿಸ್ಟರ್‌ ಮಾಡಿಕೊಂಡಿವೆ. ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಶ್ರೀ ರೇಣುಕಾಮಾತೆ ತೊಗಲುಗೊಂಬೆ ನಾಟಕ ತಂಡ, ಹಾಸನ ಜಿಲ್ಲೆ ಹೂವಿನಹಳ್ಳಿ ಕಾವಲ್‌ ರಾಮ ರಾಮ್‌ ತೊಗಲಗೊಂಬೆ ತಂಡ, ಬಳ್ಳಾರಿ ಜಿಲ್ಲೆಯ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ.

ಪೌರಾಣಿಕದಿಂದ ಸಾಮಾಜಿಕಕ್ಕೆ ಪರಿವರ್ತನೆ :  ಹಿಂದೆ ಪೌರಾಣಿಕ ನಾಟಕದಿಂದ ಜನಪ್ರಿಯವಾಗಿದ್ದ ಈ ನಾಟಕ ಪದ್ಧತಿ ನೋಡುಗರ ಕೊರತೆಯಿಂದ ಸಾಮಾಜಿಕಕ್ಕೆ ಹೊರಳಿತು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ತೊಗಲುಗೊಂಬೆ ನಾಟಕ ಮಾಡಲಾಗುತ್ತಿದೆ. ಪರಿಸರ ಸ್ವತ್ಛತೆ, ಕ್ಷೀರಭಾಗ್ಯ, ಆರೋಗ್ಯ ಯೋಜನೆಗಳನ್ನು ಜನಜಾಗೃತಿಗೆ ಮೂಡಿಸಲಾಗುತ್ತಿದೆ.

ಲಾಕ್‌ಡೌನ್‌ 4 ತಿಂಗಳ ಅವಧಿಯಲ್ಲಿ ಯಾವುದೇ ಕಾರ್ಯಕ್ರಮವಿಲ್ಲದೆ ಕಲಾವಿದರ ಜೀವನ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಲಾವಿದರ ಕೈಬಿಟ್ಟರೆ ಮತ್ತಷ್ಟು ಕಷ್ಟವಾಗಲಿದೆ. ಆದ್ದರಿಂದ ಸರ್ಕಾರ ಜನಪದ ಕಲಾವಿದರ ನೆರವಿಗೆ ಬರಬೇಕು. ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. -ದೇವರಾಜ್‌ ತೊಗಲುಗೊಂಬೆ ಕಲಾವಿದ

 

-ಸಂದೀಪ ಜಿ.ಎನ್‌. ಶೇಡ್ಗಾರ್

Advertisement

Udayavani is now on Telegram. Click here to join our channel and stay updated with the latest news.

Next