ನ್ಯೂಯಾರ್ಕ್: ಅಮೆರಿಕದ ಮಾಡೆರ್ನಾ ಇಂಕ್ ಜೈವಿಕ ತಂತ್ರಜ್ಞಾನ ಕಂಪೆನಿ ಪ್ರಯೋಗಿಸಿರುವ ಲಸಿಕೆ ಧನಾತ್ಮಕ ಫಲಿತಾಂಶ ನೀಡುವ ಸಾಧ್ಯತೆ ಇದೆ. ವಯಸ್ಕ ವ್ಯಕ್ತಿಗಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಇದನ್ನು ಪ್ರಯೋಗಿಸಲಾಗಿದ್ದು, ಸಕರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಇದು ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ ಎಂದು ಹೇಳಲಾಗಿದೆ.
ಮಾಡೆರ್ನಾದ ಕೊಡೊನಾ ವೈರಸ್ ಲಸಿಕೆಯು ತನ್ನ ಮೊದಲ ಹಂತದ ಪ್ರಯೋಗದಲ್ಲಿ,ಪ್ರತಿಕಾಯಗಳ ಉತ್ಪಾದನೆಯಲ್ಲಿ ನಿರಂತರ ಉನ್ನತ ಮಟ್ಟದ ಸ್ಥಿರತೆಯನ್ನು ಸೃಷ್ಟಿಸಿದೆ. ವಯಸ್ಕರಲ್ಲಿ ಈ ಫಲಿತಾಂಶ ಕಂಡುಬಂದಿದೆ. ಯುವ ವಯಸ್ಕರಿಗಿಂತಲೂ 55 ವರ್ಷಕ್ಕಿಂತ ಹೆಚ್ಚಿನ ವಯಸ್ಕರಲ್ಲಿ ಆಂಟಿಬಾಡಿಗಳ ಉತ್ಪಾದನೆ ಹೆಚ್ಚಾಗಿದೆ ಎಂದು ಅದು ಹೇಳಿದೆ.
ಮಾಡೆರ್ನಾದ ಆರಂಭದ ಹಂತದ ಪ್ರಯೋಗದಲ್ಲಿ ಈ ಫಲಿತಾಂಶಗಳು ಸಿಕ್ಕಿವೆ. ಹೆಚ್ಚು ವಯಸ್ಸಾದ 20 ಜನರ ಮೇಲಿನ ಲಸಿಕೆ ಪ್ರಯೋಗದ ವಿವರಗಳನ್ನು ಸಹ ಅದು ಒಳಗೊಂಡಿದೆ. ಮಾಡೆರ್ನಾ ಕಂಪೆನಿಯು ಈ ಡೇಟಾಗಳನ್ನು ಅಮೆರಿಕದ ಪ್ರತಿರಕ್ಷಣಾ ವಿಭಾಗದದ ರೋಗ ನಿಯಂತ್ರಣ ಮತ್ತು ತಡೆ ಸಲಹಾ ಸಮಿತಿಗೆ ಬುಧವಾರ ಸಲ್ಲಿಕೆ ಮಾಡಿದೆ.
ಈ ಲಸಿಕೆಯ ಪ್ರಾಯೋಗಿಕ ಬಳಕೆಯ ಡೋಸ್‌ಗಳು ಅಂತಿಮ ಹಂತದ ಪ್ರಯೋಗಕ್ಕೆ ಸಿದ್ಧವಾಗಿವೆ. ವೈರಸ್‌ನಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರತಿರಕ್ಷಣಾ ಮಟ್ಟಕ್ಕಿಂತಲೂ ಈ ಡೋಸ್‌ಗಳು ಅಧಿಕ ಮಟ್ಟದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ಪಾದಿಸುತ್ತವೆ ಎಂದಿದೆ. ಅಂತಿಮ ಹಂತದ ಲಸಿಕೆ ಪ್ರಯೋಗದಲ್ಲಿ 100 ಮೈಕ್ರೋಗ್ರಾಮ್ ಡೋಸ್‌ಗಳನ್ನು ನೀಡಲಾಗುತ್ತಿದೆ.
ವಯಸ್ಕ ರೋಗಿಗಳಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆ
ಲಸಿಕೆಯಿಂದ ಶೀತ, ಆಯಾಸ, ಜ್ವರ, ತಲೆನೋವು, ಸ್ನಾಯು ನೋವು ಮುಂತಾದ ವಿವಿಧ ಸಣ್ಣಪ್ರಮಾಣದ ಅಡ್ಡಪರಿಣಾಮಗಳು ಉಂಟಾಗಿವೆ. ಆದರೆ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ಕಂಪೆನಿ ಮಾಹಿತಿ ನೀಡಿದೆ. ಕೋವಿಡ್ 19ರಿಂದ ತೀವ್ರವಾಗಿ ಬಳಲುತ್ತಿರುವ ವಯಸ್ಕ ರೋಗಿಗಳು ಚೇತರಿಸಿಕೊಳ್ಳಲು ಅವರ ದೇಹದಲ್ಲಿ ಆಂಟಿಬಾಡಿಗಳ ಪ್ರಮಾಣದಲ್ಲಿ ಹೆಚ್ಚಳ ಅಗತ್ಯವಾಗಿದೆ.