Advertisement

ಪಾರಂಪರಿಕ ಮಣ್ಣಿನ ಪರಿಕರ ತಯಾರಿಗೆ ಆಧುನಿಕ ಸ್ಪರ್ಶ

11:15 PM Oct 12, 2019 | Sriram |

ಹೆಬ್ರಿ: ಕಳೆದ 60 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆ ಮೂಲಕ ಕುಂಬಾರಿಕೆಗೆ ವಿಶೇಷ ಉತ್ತೇಜನ ನೀಡುತ್ತ ಬಂದಿರುವ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘ ಇದೀಗ ಒಂದೇ ಸೂರಿನಡಿ ಜಿಲ್ಲೆಯ ಪರಿಣಿತ ಕುಂಬಾರಿಕೆ ಕೆಲಸಗಾರರನ್ನು ಒಟ್ಟುಗೂಡಿಸಿ ಪಾರಂಪರಿಕ ಮಣ್ಣಿನ ಪರಿಕರ ತಯಾರಿಕೆಗೆ ಮುಂದಾಗಿದೆ.

Advertisement

ಆಧುನಿಕತೆ ತಂತ್ರಜ್ಞಾನ ಸ್ಪರ್ಶ
ಕುಂಬಾರಿಕೆ ನಡೆಸುವ ಬಡ ಕುಟುಂಬಗಳನ್ನು ಗುರುತಿಸಿ ಅವರ ಕಾಯಕಕ್ಕೆ ಪೂರಕ ವಾತಾವರಣ, ತಂತ್ರಜ್ಞಾನ, ಆರ್ಥಿಕತೆ ಒದಗಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಸಂಘವು ಕಾರ್ಯೋನ್ಮುಖವಾಗಿದೆ. ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘದ ಅಧ್ಯಕ್ಷ ಸಂತೋಷ ಕುಲಾಲ್‌ ಅವರ ಯೋಜನೆಯಲ್ಲಿ ಪಾರಂಪರಿಕ ಕುಂಬಾರಿಕೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಹಾಗೂ ಆಸಕ್ತರಿಗೆ ತರಬೇತಿ, ಕೌಶಲ ಹೆಚ್ಚಿಸಲು ತಂತ್ರಜ್ಞಾನ ಸಿದ್ಧಗೊಂಡಿದೆ. ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಐತುಕುಲಾಲ್‌ ಅವರ ನೇತೃತ್ವದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದ (ಹಾಟ್‌ ಪಾಟ್‌ ಬಾಯ್ಲರ್‌) ಮಡಿಕೆ ಬೇಯಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಇದರಿಂದ ಒಂದು ಸಲಕ್ಕೆ ಒಂದು ಲೋಡ್‌ ಮಡಿಕೆಯನ್ನು ಬೇಯಿಸುವ ಸಾಮರ್ಥ್ಯ ಹೊಂದಿದ್ದು ಕಡಿಮೆ ಸಮಯದಲ್ಲಿ ಹೆಚ್ಚಿನ ಉತ್ಪಾದನೆ ಸಾಧ್ಯವಾಗಿದೆ.

ಅ.13ರಂದು ಕಾರ್ಯಾಗಾರ ಲೋಕಾರ್ಪಣೆ
ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘ ತನ್ನ ಸ್ವಂತ ಕಟ್ಟಡದಲ್ಲಿ ವಿಶಾಲವಾದ ಪ್ರದೇಶದಲ್ಲಿ ಸುಸಜ್ಜಿತ ಕುಂಬಾರಿಕಾ ಕಾರ್ಯಾಗಾರ ಘಟಕವನ್ನು ಸ್ಥಾಪಿಸಿದ್ದು ವಿವಿಧ ಮಣ್ಣಿನ ಪರಿಕರಗಳ ತಯಾರಿ, ಪ್ರಾತ್ಯಕ್ಷಿಕೆ, ಪ್ರದರ್ಶನ ನಡೆಯಲಿದ್ದು ಆಧುನಿಕ ಯಂತ್ರ ಘಟಕವನ್ನು ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರು ಅ. 13ರಂದು ಉದ್ಘಾಟಿಸಲಿದ್ದಾರೆ.

ವಿನೂತನ ಪ್ರದರ್ಶನ ಮಳಿಗೆ
ಮಳಿಗೆಯಲ್ಲಿ ಹೊಸ ಮಾರುಕಟ್ಟೆ ವ್ಯವಸ್ಥೆ, ಆಧುನಿಕತೆಯೊಂದಿಗೆ ತಯಾರಿಸಿದ ಪರಿಕರ ಹಾಗೂ ಬಳಕೆಯ ಲಾಭದ ಬಗ್ಗೆ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುವ ಗೈಡ್‌ ವ್ಯವಸ್ಥೆಗೂ ಮುಂದಾಗಿದೆ. ಕುಂಬಾರಿಕೆ ಕೆಲಸಕ್ಕೆ ಅಗತ್ಯವಾದ ಮೂಲ ಪರಿಕರ ಸಂಗ್ರಹಿಸಿ, ಹಾಟ್‌ ಪಾಟ್‌ ಬಾಯ್ಲರ್‌ ಸ್ಥಾಪಿಸಿ, ಅಗತ್ಯ ಯಂತ್ರೋಪಕರಣ ಖರೀದಿಸಿ ತರಬೇತಿ ನೀಡಿ ಹೊಸ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲಿದೆ.

ನೂರಕ್ಕೂ ಹೆಚ್ಚಿನ ಮಣ್ಣಿನ ಪರಿಕರಗಳು
ಮಣ್ಣಿನ ರೆಫ್ರಿಜರೇಟರ್‌, ಕೂಲರ್‌, ಕುಕ್ಕರ್‌, ದೀಪಸ್ತಂಭ, ಹೂಜಿ, ಬಾಣಲೆ, ಮಡಕೆ, ಬಿಸಲೆ, ಹಣತೆ, ಬಿಸಿ ನೀರಿನ ಸ್ನಾನಕ್ಕೆ ತಯಾರಿಸಿದ ನಾನಾ ಸೈಜಿನ ಹಂಡೆ, ಮಣ್ಣಿನ ಸಣ್ಣ ಮಡಕೆ, ಓಡು ದೋಸೆ ಕಾವಲಿ, ಮಣ್ಣಿನ ಒಲೆ, ವಿವಿಧ ಆಕೃತಿಯ ಮಣ್ಣಿನ ಕೊಡ, ಚಟ್ಟಿ, ಮರಾಯಿ, ಅಡುಗೆ ಮಡಕೆ, ಹಾಲು ಕಾಯಿಸುವ ಪಾತ್ರೆ, ಕಲಶ, ಕವಚ, ಗಿಂಡಿ, ಗೋಪುರ, ಬಾಣಿ, ಓಡು, ದೂಪ, ಮೊಗೆ, ಕಾವಲಿ, ಅಳಗೆ, ಕಡಾಯಿ, ಹೂದಾನಿ ಮೊದಲಾದ ನೂರಕ್ಕೂ ಮಿಕ್ಕಿ ಮಣ್ಣಿನ ಪರಿಕರಗಳು ಇಲ್ಲಿ ತಯಾರಾಗುತ್ತದೆ.

Advertisement

ಎಲ್ಲ ವಿಧದ ಪರಿಕರಗಳು ಒಂದೇ ಸೂರಿನಲ್ಲಿ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆ ಆರಂಭಗೊಂಡಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕುಲಾಲ್‌ ಪಟ್ಲ ಹೇಳುತ್ತಾರೆ.

55 ವರ್ಷಗಳಿಂದ ಈ ಪರಿಕರಗಳ ತಯಾರಿಕೆಯಲ್ಲಿ ನಿರತನಾಗಿದ್ದೇನೆ. ಮನೆ ಮನೆಗೆ ಹೋಗಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಹಿಂದಿನಿಂದಲೂ ಇದರ ಬಳಕೆಯಿದ್ದು,ಆಧುನಿಕತೆಯಿಂದ ಹಾಗೂ ಅರಿವು ಇಲ್ಲದಿರುವುದರಿಂದ ಬಳಕೆ ಕಡಿಮೆಯಾಗಿದೆ.ಆದರೆ ಈಗ ಪೆರ್ಡೂರು ಕುಂಬಾರರ ಕೈಗಾರಿಕಾ ಸಂಘ ಜನರಿಗೆ ಈ ಬಗ್ಗೆ ಅರಿವು ಮೂಡಿಸುತ್ತಿದ್ದು ಇದೀಗ ಜನ ಇದರ ಬಳಕೆ ಹೆಚ್ಚಿಸಿದ್ದಾರೆ.
-ಗೋವಿಂದ ಕುಲಾಲ್‌
ಕುಂಬಾರಿಕ ವೃತ್ತಿ ನಿಪುಣರು,ಕರ್ಜೆ

ಜಿಲ್ಲೆ ಬಡ ಕುಟುಂಬಗಳನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಲು, ಜಿಲ್ಲೆಯ ಪರಿಣತ ರನ್ನು ಒಟ್ಟುಗೂಡಿಸಿ ವಿಶೇಷವಾಗಿ ಕಲಿಯಲು ಆಸಕ್ತಿ ಇರುವವರಿಗೆ ತರಬೇತಿ ನೀಡಿ ವಿವಿಧ ಮಣ್ಣಿನ ಪರಿಕರಗಳ ತಯಾರಿಕೆ ಉದ್ದೇಶ ಹೊಂದಿದೆ.
-ಸಂತೋಷ ಕುಲಾಲ್‌ ಪಕ್ಕಾಲು, ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕಾ ಸಂಘ ಪೆರ್ಡೂರು

Advertisement

Udayavani is now on Telegram. Click here to join our channel and stay updated with the latest news.

Next