ಕಲಬುರಗಿ: ಮೂಲಭೂತ ಸೌಕರ್ಯಗಳಿಲ್ಲದ ಜಿಲ್ಲೆಯ ಶಹಬಾದ ಪಟ್ಟಣದ ಇಎಸ್‌ಐ ಆಸ್ಪತ್ರೆ ಪುನಶ್ಚೇತನಕ್ಕೆ ತಕ್ಷಣವೇ ಕ್ರಿಯಾಯೋಜನೆ ರೂಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಸಚಿವರು, ಶಹಬಾದ್‌ನ ಇಎಸ್‌ಐ ಆಸ್ಪತ್ರೆ ಪುನಶ್ಚೇತನಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.
ಶಹಾಬಾದ ಪಟ್ಟಣದ ವಾಡಿ ರಸ್ತೆಯಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಇಎಸ್‌ಐ ಆಸ್ಪತೆಯನ್ನು ಆಧುನಿಕ ಸೌಲಭ್ಯ ಕಲ್ಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಬೇಕು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಬೇಕು. ಆಸ್ಪತ್ರೆ ಆವರಣದಲ್ಲಿ ಬೆಳೆದಿರುವ ಗಿಡ-ಗಂಟೆಗಳು, ಬಿರುಕು ಬಿಟ್ಟಿರುವ ಗೋಡೆಗಳು, ಕೈಕೊಟ್ಟಿರುವ ವಿದ್ಯುತ್ ಸಂಪರ್ಕ, ಹಾಳಾಗಿರುವ ಬೆಡ್ ಗಳು, ಚಿಕಿತ್ಸಾ ಕೊಠಡಿ, ರೋಗಿಗಳು ತಂಗುವ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಸ್ನಾನದ ಕೋಣೆ ಸೇರಿದಂತೆ ಎಲ್ಲ ರೀತಿಯ ಸವಲತ್ತು ಕಲ್ಪಿಸಬೇಕು ಎಂದು ಸಚಿವರು ಸೂಚಿಸಿದರು.
ಈ ಆಸ್ಪತ್ರೆ ಪುನಶ್ಚೇತನವಾದರೆ ಸಾವಿರಾರು ಜನರಿಗೆ ಆರೋಗ್ಯ ಸೌಲಭ್ಯ ಸಿಗಲಿದೆ. ಪಾಳು ಬಿದ್ದಿರುವ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಬೇಕು. ಸರ್ಕಾರದ ವತಿಯಿಂದ ಎಲ್ಲ ರೀತಿಯ ಆರ್ಥಿಕ ನೆರವು ನೀಡಲಾಗುವುದು. ಇದು ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆ ಆಗಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಕೆಲಸ ಆರಂಭವಾಗಲಿ ಎಂದು ಹೇಳಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್ ಮಾತನಾಡಿ, ಐಎಸ್‌ಐ ಆಸ್ಪತ್ರೆಗಳು ಕೇಂದ್ರ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇಲಾಖೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಜತೆಗೆ ನಮ್ಮ ಇಲಾಖೆಯಿಂದ ಆರ್ಥಿಕ ನೆರವು ಸೇರಿದಂತೆ ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.