Advertisement

ಆಧುನಿಕ ತಂತ್ರಜ್ಞಾನ ಶಿಕ್ಷಣ ಬದುಕಿಗೆ ಹೆದ್ದಾರಿ

09:37 AM Aug 05, 2019 | Suhan S |

ಗಜೇಂದ್ರಗಡ: ತಾಂತ್ರಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಶಿಕ್ಷಣ ಬದುಕಿಗೆ ಹೆದ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಶಾಲಾ ದಿನಗಳಲ್ಲಿಯೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಇದಕ್ಕೆ ಶಿಕ್ಷಣ ಇಲಾಖೆ ಪ್ರೋತ್ಸಾಹ ನೀಡಲಾಗುವುದು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ, ಗಣಿತ ವಿಷಯದ ಚಿತ್ರಗಳ ರಂಗೋಲಿ ಸ್ಪರ್ಧೆ ವೀಕ್ಷಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿಜ್ಞಾನ ಸಹ ಬದಲಾವಣೆಯಾಗುತ್ತಿದೆ. ವಿಶ್ವವೇ ಇದರ ಮೇಲೆ ನಿಂತಿದೆ. ವಿದ್ಯಾರ್ಥಿಗಳು ಯಾವುದೇ ಸಣ್ಣ ಸಮಸ್ಯೆಯನ್ನು ಅಂತರ್ಜಾಲ ತಾಣದಲ್ಲಿ ಹುಡುಕಿ ಪರಿಹಾರ ಕಂಡುಕೊಳ್ಳುವಷ್ಟರ ಮಟ್ಟೆಗೆ ವಿಜ್ಞಾನ ಕ್ಷಿಪ್ರ ಕ್ರಾಂತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಭವಿಷ್ಯ ಭಾರತದ ಬುನಾದಿಯಾಗಿದೆ. ವಿಜ್ಞಾನ ತಂತ್ರಜ್ಞಾನಗಳ ಪರಿಚಯ, ವಿಜ್ಞಾನ ಗೋಷ್ಠಿ, ಪ್ರಾಯೋಗಿಕ ಪ್ರಾತ್ಯಕ್ಷಿಕೆ ಸೇರಿ ಇನ್ನಿತರ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಶಿಕ್ಷಕರು ಹಾಗೂ ಪಾಲಕರು ಶ್ರಮಿಸಬೇಕಾಗಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭದಲ್ಲಿ ವಿಜ್ಞಾನ ವಿಷಯ ಕಠಿಣ ಆಗಬಾರದು ಎನ್ನುವ ಉದ್ದೇಶದಿಂದ ಇಂಥಹ ಸ್ಪರ್ಧೆಗಳನ್ನು ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ಹಮ್ಮಿಕೊಳ್ಳುವ ಮೂಲಕ ವಿದ್ಯಾಭ್ಯಾಸಕ್ಕೆ ಪೂರಕವಾಗುವಂತಹ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮುಖ್ಯೋಪಾಧ್ಯಾಯ ಜಾಲಿಹಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ವಿಷಯಗಳ ಸ್ಥೂಲ ಪರಿಚಯ ತೀರಾ ಅವಶ್ಯಕವಾಗಿದೆ. ವಿಜ್ಞಾನ ಎಂದರೆ ನಿಖರವಾದ ಮತ್ತು ಸಂದೇಹಗಳಿಲ್ಲದ ವಿಶೇಷ ಜ್ಞಾನವಾಗಿದೆ. ವಿಜ್ಞಾನ ಮೂಲಕ ನಿರೀಕ್ಷಿತ ಫಲ ಕಂಡುಕೊಳ್ಳಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಜ್ಞಾನ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

Advertisement

ಶಿಕ್ಷಕರಾದ ಕೆ.ಎಸ್‌. ರಾಜೂರ, ಐ.ಎಸ್‌. ಬದಾಮಿ ಎಫ್‌.ಎಚ್. ಡಾಲಾಯತ್‌, ಎಸ್‌.ಡಿ. ಕುರಿ, ಎಸ್‌.ಡಿ. ಕೋಲಕಾರ, ಎನ್‌.ಜಿ. ಹೊಸಮನಿ, ಎಂ.ವಿ. ಲೂತಿಮಠ, ಕೆ.ಸಿ. ಲಮಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next