Advertisement
ಕೊರಟಗೆರೆ ತಾಲೂಕು, ದಾಸರಹಳ್ಳಿಯ ಹನುಮಂತರಾಜು ಮೊದಲು ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಸ್ವಂತಕ್ಕೆ ಏನಾದ್ರೂ ಮಾಡಿಕೊಳ್ಳಬೇಕು ಎಂದು ಮಧುಗಿರಿಯಲ್ಲಿ “ಅನ್ನಪೂರ್ಣ’ ಎಂಬ ಹೋಂಡಾ ಶೋ ರೂಂ ಪ್ರಾರಂಭಿಸಿದ್ದರು. ಇವರಿಗೆ ಪ್ರತಿದಿನ ಹೊರಗಡೆಯಿಂದ ಊಟ, ತಿಂಡಿ ತರಬೇಕಿತ್ತು. ಇದಕ್ಕೆ ತುಂಬಾ ಹಣ ಖರ್ಚಾಗುತ್ತಿತ್ತು. ಹೀಗಾಗಿ ನಾವೇ ಸ್ವಂತಕ್ಕೆ ಹೋಟೆಲ್ ಮಾಡೋಣ ಎಂದು ತಮ್ಮ ಶೋ ರೂಂನ ಹೆಸರಾದ “ಅನ್ನಪೂರ್ಣ’ ಹೆಸರಲ್ಲೇ ಆರಂಭಿಸಿದ್ರು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿತು. ನಂತರ ಮಧುಗಿರಿಯಲ್ಲೂ ಒಂದು ಸುಸಜ್ಜಿತ ಹೋಟೆಲ್ ಆರಂಭಿಸಲಾಯಿತು. ಹೋಟೆಲ್‌ನ ಅದ್ಧೂರಿತನ ಕಂಡು ಅಲ್ಲಿ ಎಲ್ಲದಕ್ಕೂ ರೇಟ್ ಹೆಚ್ಚಿರುತ್ತದೆ ಎಂದು ಯೋಚಿಸಿ, ಹಳ್ಳಿಯ ಜನರು, ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದರು. ಕ್ರಮೇಣ, ಜೇಬಿಗೆ ಹೊರೆಯಾಗದಂತೆ ತಿಂಡಿ, ಊಟ ಸಿಗುತ್ತಿದ್ದ ಕಾರಣಕ್ಕೆ ಗ್ರಾಹಕರು ಹೋಟೆಲ್‌ಗೆ ಬರತೊಡಗಿದರು.
ಹನುಮಂತರಾಜು ಇತಿಹಾಸದ ವಿದ್ಯಾರ್ಥಿ. ಹೋಟೆಲ್‌ಗೆ ಬರುವವರಿಗೆ ಮಧುಗಿರಿಯ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಆಸೆಯಿಂದ ಏಕಶಿಲಾ ಬೆಟ್ಟ, ಐತಿಹಾಸಿಕ ವೆಂಕಟರಮಣಸ್ವಾಮಿ ದೇವಾಲಯ, ಹಂಪಿಯ ಕಲ್ಲಿನ ರಥ… ಹೀಗೆ ಹಲವು ಚಿತ್ರಗಳನ್ನು ಹೋಟೆಲ್‌ನ ಗೋಡೆಗೆ ಹಾಕಿಸಿದ್ದಾರೆ. 25 ನೌಕರರಿಗೆ ಉದ್ಯೋಗ:
ಈ ಹೋಟೆಲ್‌ನಿಂದಾಗಿ 25 ಮಂದಿಗೆ ನೌಕರಿ ಸಿಕ್ಕಿದೆ.
Related Articles
ಸೋಮವಾರ ರಾಗಿ ಶ್ಯಾವಿಗೆ(ಒತ್ತುವ ಶ್ಯಾವಿಗೆ) ಮತ್ತು ಶುಕ್ರವಾರದ ಹೋಳಿಗೆ ಊಟ ಹೋಟೆಲ್‌ನ ವಿಶೇಷ. ಇತರೆ ಹೋಟೆಲ್‌ನಲ್ಲಿ ಹೋಳಿಗೆ ಊಟ ಸಿಗಬಹುದು. ಆದ್ರೆ, ಶ್ಯಾವಿಗೆ ಊಟ ಸಿಗುವುದು ಕಷ್ಟ. ಮನೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಮಾತ್ರ ಮಾಡುವ ರಾಗಿ ಶ್ಯಾವಿಗೆ ಈ ಭಾಗದಲ್ಲಿ ಹೆಚ್ಚು ಪರಿಚಿತವಾದದ್ದು. ಹೀಗಾಗಿ ಅದು ಎಲ್ಲರಿಗೂ ಸಿಗಲಿ ಎಂಬ ಕಾರಣಕ್ಕೆ ವಾರದಲ್ಲಿ ಒಂದು ದಿನ ಮಾಡಲಾಗುತ್ತದೆ. ಶ್ಯಾವಿಗೆ ಜೊತೆಗೆ ಕಾಯಿ ಹಾಲು, ಕಡಲೇಬೀಜದ ಪುಡಿ, ತುಪ್ಪ ಕೊಡಲಾಗುತ್ತದೆ. ದರ 50 ರೂ.
Advertisement
ಸಾಮಾನ್ಯವಾಗಿ ಸಿಗುವ ತಿಂಡಿ, ಊಟ:ಬೆಳಗ್ಗಿನ ತಿಂಡಿಗೆ ತಟ್ಟೆ ಇಡ್ಲಿ(1ಕ್ಕೆ 10 ರೂ.), ಪುಟ್ಟ ಇಡ್ಲಿ, ವಡೆ ಸೇರಿ ದರ 25 ರೂ., ರೈಸ್‌ಬಾತ್(ದರ 30 ರೂ.), ರಾಗಿ, ರವೆ ಸೇರಿ 60 ಬಗೆಯ ದೋಸೆ ಇರುತ್ತೆ(ದರ 40 ರೂ. ಒಳಗೆ). ಮಧ್ಯಾಹ್ನ ಊಟಕ್ಕೆ ಮುದ್ದೆ, ಚಪಾತಿ, ಪೂರಿ ಊಟ ಜೊತೆಗೆ ಪಾಯಸ, ಮಜ್ಜಿಗೆ ಕೊಡಲಾಗುತ್ತದೆ(ದರ 50 ರೂ.). ಸೋಮವಾರ ರಾಗಿ ಶ್ಯಾವಿಗೆ, ಶುಕ್ರವಾರ ಹೋಳಿಗೆ ಊಟ ಸಿಗುತ್ತದೆ. ಹೋಟೆಲ್ ವಿಳಾಸ:
ಹೋಟೆಲ್ ಅನ್ನಪೂರ್ಣ, ಎಚ್.ಪಿ.ಪೆಟ್ರೋಲ್ ಬಂಕ್ ಸಮೀಪ, ಗೌರಿಬಿದನೂರು ರಸ್ತೆ, ಮಧುಗಿರಿ. ಹೋಟೆಲ್ ಸಮಯ:
ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆವರೆಗೆ, ವಾರದ ರಜೆ ಇಲ್ಲ. – ಭೋಗೇಶ ಆರ್.ಮೇಲುಕುಂಟೆ/ ಸತೀಶ್ ಮಧುಗಿರಿ