ಕುಂದಾಪುರ: ರೈತರ ಜಮೀನಿನಲ್ಲಿ ಆಧುನಿಕ ಕೃಷಿ ಪದ್ಧತಿ ಹಾಗೂ ನವೀನ ತಾಂತ್ರಿಕತೆ ಬಗ್ಗೆ ಪ್ರಾತಿಕ್ಷಿಕೆ ಗಳ ಮೂಲಕ ರೈತರಿಗೆ ತಿಳಿ ಹೇಳಿದರೆ ಇಂದಿನ ಕೃಷಿ ಗುಣ ಮಟ್ಟದ ಸುಧಾರಣೆ ಸಾಧ್ಯ. ಇಲಾಖೆಯಿಂದ ಸಿಗುವ ಮಾಹಿತಿ ಹಾಗೂ ಸವಲತ್ತುಗಳನ್ನು ಬಳಸುವ ಮಾಹಿತಿ ನೀಡುವಲ್ಲಿ ಕೃಷಿ ಇಲಾಖೆ ಸೂಕ್ತ ಸಮಯದಲ್ಲಿ ರೈತರಿಗೆ ಸ್ಪಂದಿಸುವ ಅಗತ್ಯ ಇದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಕುಂದಾಪುರ ತಾಲೂಕಿನ ಕಾಳಾವರ ಗ್ರಾ.ಪಂ. ವ್ಯಾಪ್ತಿಯ ಸುಣ್ಣಾರಿ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಜರಗಿದ 9 ದಿನಗಳ ಕುಂದಾಪುರ ಹೋಬಳಿ ಮಟ್ಟದ ಕೃಷಿ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮವು ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಕುಂದಾಪುರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವಾರ, ಗ್ರಾಮ ಪಂಚಾಯತ್ ಕಾಳಾವರ ಹಾಗೂ ತಾಲೂಕಿನ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಕಾಳಾವರ ಗ್ರಾ.ಪಂ. ಅಧ್ಯಕ್ಷ ರವಿರಾಜ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ರಾಮಕಿಶನ್ ಹೆಗ್ಡೆ, ಶೈಲಾಶ್ರೀ ಎಸ್. ಶೆಟ್ಟಿ, ಕೊರ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಾ ಕುಲಾಲ, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕನ ಅಧ್ಯಕ್ಷ ದಿನಕರ ಶೆಟ್ಟಿ, ಶ್ರೀ ಧ.ಗ್ರಾ. ಯೋಜನೆ ಕಾಳಾವರ ಒಕ್ಕೂಟದ ಅಧ್ಯಕ್ಷ ಸುರೇಶ ಆಚಾರ್ಯ, ತೋಟಗಾರಿಕಾ ಇಲಾಖೆಯಿಂದ ಹಿರಿಯ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆತ್ಮ ಯೋಜನೆಯಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ ಪಡೆದ ರಾಮಚಂದ್ರ ಭಟ್ ದಂಪತಿಯನ್ನು ಸಮ್ಮಾನಿಸಲಾಯಿತು.
ಕುಂದಾಪುರ ಹೋಬಳಿ ಸಹಾಯಕ ಕೃಷಿ ಅಧಿಕಾರಿ ರಾಜೇಂದ್ರ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕ ವಿಟuಲ ರಾವ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.