ಕುಂದಾಪುರ: ಪಠ್ಯ ಪುಸ್ತಕದಲ್ಲಿರುವ ಶಿಕ್ಷಣ 10 ವರ್ಷ ಹಿಂದಿನ ಶಿಕ್ಷಣವಾಗಿದ್ದು ಮಕ್ಕಳಿಗೆ ಆಧುನಿಕ ಶಿಕ್ಷಣ ಬೋಧಿಸಬೇಕು. ಅದಕ್ಕಾಗಿ ಅಟಲ್ ಟಿಂಕರಿಂಗ್ ಲ್ಯಾಬ್‌ನಂತಹ ಆಧುನಿಕ ಬೋಧನಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಬುಧವಾರ ಹಕ್ಲಾಡಿ ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಜಗತ್ತಿಗೆ ವಿದ್ಯಾರ್ಥಿಗಳನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ಗ ಕೇಂದ್ರದ ನೀತಿ ಆಯೋಗ ಒಟ್ಟು 20 ಲಕ್ಷ ರೂ. ಕೊಡುತ್ತಿದ್ದು, ಮೊದಲಿಗೆ ಲ್ಯಾಬ್‌ನ ಪರಿಕರ, ಸಲಕರಣೆಗಳ 10 ಲಕ್ಷ ರೂ. ನೀಡುತ್ತದೆ. ಬಾಕಿ ಉಳಿದ 10 ಲಕ್ಷ ರೂ. ಮುಂದಿನ 5 ವರ್ಷಗಳಲ್ಲಿ ಕೊಡುತ್ತದೆ . 6ರಿಂದ 10ನೇ ತರಗತಿವರೆಗೆ ಮಕ್ಕಳಿಗೆ ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಮತ್ತು ಗಣಿತವನ್ನು ಇದರಲ್ಲಿ ಬೋಧಿಸಲಾಗುತ್ತದೆ. ಅಟಲ್ ಟಿಂಕರಿಂಗ್ ಲ್ಯಾಬ್ ಆರಂಭಗೊಳ್ಳುತ್ತಿರುವ ಉಡುಪಿ ಜಿಲ್ಲೆಯ ಎರಡನೇ ಶಾಲೆ ಇದಾಗಿದೆ ಎಂದರು.
ತಾಲೂಕು ಪಂಚಾಯತ್ ಸದಸ್ಯೆ ಇಂದಿರಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಕಿಶೋರ್ ಕುಮಾರ್ ಶೆಟ್ಟಿ, ಗಣಪಯ್ಯ ಶೆಟ್ಟಿ, ರಾಜೀವ ಶೆಟ್ಟಿ ಉಪಸ್ಥಿತರಿದ್ದರು. ಪಿ.ಕೆ. ಶೆಟ್ಟಿ ಉಪನ್ಯಾಸ ನೀಡಿದರು.