Advertisement

ದಾಸನದೊಡ್ಡಿಯ ಕೆರೆಕಟ್ಟೆಗಳ ನಿರ್ಮಾತೃ ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರು ಇನ್ನಿಲ್ಲ

10:20 AM Oct 17, 2022 | Team Udayavani |

ಮಂಡ್ಯ: ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕೆರೆಕಟ್ಟೆಗಳ ನಿರ್ಮಾತೃ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದ ಕಲ್ಮನೆ ಕಾಮೇಗೌಡ (84) ಸೋಮವಾರ ಮುಂಜಾನೆ 4 ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ.

Advertisement

ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಕಲ‌ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಮಧ್ಯಾಹ್ನ ಗ್ರಾಮದಲ್ಲಿ‌ ನಡೆಯಲಿದೆ.

ಕಟ್ಟೆಗಳ ನಿರ್ಮಾತೃ: ದಾಸನದೊಡ್ಡಿಯ ಗ್ರಾಮದ ಬಳಿ‌ ಇರುವ ಕುಂದನ ಬೆಟ್ಟದಲ್ಲಿ ಕಾಮೇಗೌಡರು ಸ್ವಂತ ಖರ್ಚಿನಲ್ಲಿ ಸುಮಾರು 14ಕ್ಕೂ ಹೆಚ್ಚು ಕಟ್ಟೆಗಳನ್ನು ನಿರ್ಮಿಸಿದ್ದರು.

ಮೊದಲು ತಾವೇ ಸ್ವತಃ ಕೈಯಿಂದಲೇ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ನಂತರ ತಾವು ಸಾಕಿದ್ದ ಕುರಿಗಳನ್ನು ಮಾರಿ ಜೆಸಿಬಿ ಮೂಲಕ ಹಲವು ಕಟ್ಟೆಗಳನ್ನು ನಿರ್ಮಿಸಿದ್ದರು. ಇದರಿಂದ ಪ್ರಾಣಿ, ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲೂ ನೀರು ಸಿಗುವಂತೆ ಮಾಡಿದ್ದರು. ಅಲ್ಲದೆ ಅಂತರ್ಜಲ ವೃದ್ಧಿಗೂ ಕಾರಣರಾಗಿದ್ದರು. ಜೊತೆಗೆ ಕಟ್ಟೆಗಳ ಸುತ್ತ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿ ವಹಿಸಿದ್ದರು.

ಪ್ರಧಾನಿ ಮೋದಿ ಶ್ಲಾಘನೆ: ಕಲ್ಮನೆ ಕಾಮೇಗೌಡರ ಕಾರ್ಯವನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ್ದರು. ಇದರಿಂದ ಕಾಮೇಗೌಡರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

Advertisement

ವಿ.ವಿ.ಎಸ್.ಲಕ್ಷ್ಮಣ್ ಮೆಚ್ಚುಗೆ: ಖ್ಯಾತ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ಕೂಡ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಗೌರವ ಪ್ರಶಸ್ತಿ: ಇವರ ಕಾರ್ಯಕ್ಕೆ ರಾಜ್ಯಾದ್ಯಂತ ವಿವಿಧ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. ಸಂಘ ಸಂಸ್ಥೆಗಳು ನಗದು ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದವು. ಸರ್ಕಾರ, ಜಿಲ್ಲಾಡಳಿತ ಇವರ ಸೇವೆಗೆ ಜೀವಿತಾವಧಿವರೆಗೂ ಸಂಚಾರಕ್ಕೆ ಸಾರಿಗೆ ಪಾಸ್ ನೀಡಿತ್ತು. ಮನೆ ನಿರ್ಮಿಸಿಕೊಡುವ ಭರವಸೆ ನೀಡಿತ್ತು.

ಇದನ್ನೂ ಓದಿ:ದೇವಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯ ಮದುವೆ : 2 ಅರ್ಚಕರು ಸೇರಿ ಮೂವರ ಬಂಧನ

ಪದ್ಮಶ್ರೀ ಪ್ರಶಸ್ತಿ ಕೈತಪ್ಪಿತ್ತು: ಗ್ರಾಮದ ಕೆಲವರ ವಿರೋಧ, ಗೊಂದಲದಿಂದ ಜಿಲ್ಲಾಡಳಿತ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡದ ಹಿನ್ನಲೆಯಲ್ಲಿ ಕೈತಪ್ಪಿತ್ತು. ರಾಜ್ಯ ಸರ್ಕಾರ 2018ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಸಂತಾಪ: ಕಲ್ಮನೆ ಕಾಮೇಗೌಡರ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ದುಃಖ ವ್ಯಕ್ತಪಡಿಸಿದ್ದಾರೆ. ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಕಲ್ಮನೆ ಕಾಮೇಗೌಡರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ. ಅಂತರ್ಜಲ, ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರ ನಿಧನದಿಂದ ಸಾಮಾಜಿಕ ಸೇವಾಕ್ಷೇತ್ರ ಬಡವಾಗಿದೆ ಎಂದು ಸಚಿವರು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next