Advertisement
ಹುಬ್ಬಳ್ಳಿಯಲ್ಲಿ ಸುರಿದ ಮಳೆ ಸಾಕಷ್ಟು ಅವಘಡಗಳನ್ನೇ ಸೃಷ್ಟಿಸಿದ್ದು, ಬೆಳಗಾವಿ ಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಿ ಸಿಡಿಲು ಬಡಿದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಶ್ರೀಕಿಶನ್ (56) ಸಾವನ್ನಪ್ಪಿದ್ದು, ಬಿಹಾರ ಮೂಲದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
Related Articles
Advertisement
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ, ಮೂಡಿಗೆರೆ, ಕಳಸ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಹಾಗೂ ಚಿಕ್ಕಮಗಳೂರು ನಗರದ ಕೆಲವೆಡೆ ಮಳೆಯಾಗಿದೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನದ ವೇಳೆ ಆರಂಭವಾದ ಮಳೆ ರಾತ್ರಿವರೆಗೂ ಮುಂದುವರಿದಿತ್ತು. ಬಹುತೇಕ ಕಡೆ ರಸ್ತೆಗಳಲ್ಲೇ ನೀರು ಹರಿದು, ಜನ ಹಾಗೂ ವಾಹನ ಸಂಚಾರಕ್ಕೆ ಪರದಾಡಬೇಕಾಯಿತು. ಕೆಲವು ಅಡಿಗಳಷ್ಟು ನೀರು ನಿಂತಿದ್ದ ಪರಿಣಾಮ ದ್ವಿಚಕ್ರ ವಾಹನಗಳು ಅರ್ಧದಷ್ಟು ಮುಳುಗಿದ್ದವು. ಬೆಳಗಾವಿ ಜಿಲ್ಲೆಯಲ್ಲೂ ನಗರ ಸಹಿತ ಗ್ರಾಮೀಣ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಚಿತ್ರದುರ್ಗ ನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದೆ.
ಮಳೆ ಗಾಳಿಗೆ ನೆಲಕ್ಕೊರಗಿದ ಬಾಳೆ ಫಸಲುಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಗಾಳಿ ಸಹಿತ ಮಳೆಗೆ ಭಾರಿ ಗಾತ್ರದ ಆಲದ ಮರ ಬಿದ್ದು ನಾಲ್ಕು ಮನೆಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಿರಿಯಾಪಟ್ಟಣದಲ್ಲೂ ಧಾರಾಕಾರ ಮಳೆಯಾಗಿದೆ. ಚಾಮರಾಜನಗರದಲ್ಲಿ ಶನಿವಾರ ಮಧ್ಯಾಹ್ನ ಗಾಳಿ ಮಳೆಯಿಂದಾಗಿ ಬ್ಯಾಡಮೂಡ್ಲು ಗ್ರಾಮದ ಶ್ರೀನಿವಾಸ್ ಎಂಬವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು 1,500 ಬಾಳೆಗಿಡಗಳು ನೆಲಕಚ್ಚಿದವು. ಹಾಸನ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಹಾಗೂ ಶನಿವಾರ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲೂ ಧಾರಾಕಾರ ಮಳೆಯಾಗಿದೆ.