ಹುಣಸೂರು: ಹುಣಸೂರು ತಾಲೂಕಿನಾದ್ಯಂತ ಮಂಗಳವಾರ ಸಂಜೆ ಬಿದ್ದ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಲುಕ್ಸಾನಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಜಾನೆಯಿಂದಲೇ ನಗರಸೇರಿದಂತೆ ತಾಲೂಕಿನಾದ್ಯಂತ ಚಳಿ, ಮೋಡ ಕವಿದ ವಾತಾರವಣವಿತ್ತು. ಸಂಜೆ ನಗರ ಸೇರಿದಂತೆ ತಾಲೂಕಿನ ಹನಗೋಡು, ನೇರಳಕುಪ್ಪೆ, ಗುರುಪುರ, ಮಾಜಿ ಗುರುಪುರ, ದೊಡ್ಡಹೆಜ್ಜೂರು, ಹೊಸೂರು ಕೊಡಗು ಕಾಲೋನಿ, ಶಿಂಡೇನಹಳ್ಳಿ, ಕೊಳವಿಗೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.
ತಾಲೂಕಿನಾದ್ಯಂತ ಭತ್ತ,ರಾಗಿ,ಹುರಳಿ ಸೇರಿದಂತೆ ವಿವಿಧ ಬೆಳೆಗಳ ಒಕ್ಕಣೆ ಕಾರ್ಯ ನಡೆಯುತ್ತಿದ್ದು, ಅಕಾಲಿಕ ಮಳೆಯಿಂದಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಈ ಮೊದಲು ಅತಿಯಾದ ಮಳೆಯಿಂದ ಬೆಳೆ ಇಳುವರಿ ಇಲ್ಲದೆ ತೊಂದರೆ ಎದುರಿಸುತ್ತಿದ್ದ ರೈತರು ಇದೀಗ ಚಳಿಗಾಲದಲ್ಲೂ ಮಳೆಯಾಗುತ್ತಿರುವ ಪರಿಣಾಮ ಹವಾಮಾನ ವೈಪರಿತ್ಯ ಉಂಟಾಗಿ ಎಲ್ಲರೂ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
ನಾಗರಹೊಳೆಯಲ್ಲಿ ಭಾರೀ ಮಳೆ
ನಾಗರಹೊಳೆ ರಾಷ್ಟ್ರೀ ಯ ಉದ್ಯಾನವನದ ವೀರನಹೊಸಹಳ್ಳಿ, ಹುಣಸೂರು ವಲಯಗಳಲ್ಲಿ ಸಾಧಾರಣ ಮಳೆಯಾಗಿದ್ದರೆ, ನಾಗರಹೊಳೆ, ಕಲ್ಲಹಳ್ಳ, ಮೇಟಿಕುಪ್ಪೆ, ಆನೆಚೌಕೂರು ವಲಯಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಸದ್ಯಕ್ಕೆ ಬೆಂಕಿಯ ಆತಂಕ ದೂರವಾಗಿದೆ.