Advertisement

17ರಿಂದ ವಿಧಾನಮಂಡಲ ಅಧಿವೇಶನ

11:49 PM Feb 14, 2020 | Lakshmi GovindaRaj |

ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ ಫೆ.17ರಿಂದ 20ರವರೆಗೆ ಹಾಗೂ ಮಾ.2ರಿಂದ 31ರವರೆಗೆ ಒಟ್ಟು 25 ದಿನ ವಿಧಾನಸಭೆ ಕಲಾಪ ನಡೆಯಲಿದೆ. ಮಾ.2, 3ರಂದು ಸಂವಿಧಾನದ ಆಶಯ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಮಾ.5ಕ್ಕೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಜೆಟ್‌ ಮಂಡಿಸಲಿದ್ದಾರೆ.

Advertisement

ಸೂಚನಾ ನಿರ್ಣಯ: ವಿಧಾನ ಸೌಧದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಫೆ.17ರಿಂದ 20ರವರೆಗೆ ವಿಧಾನ ಮಂಡಲ ಜಂಟಿ ಅಧಿವೇಶನ ಹಾಗೂ ಮಾ.2ರಿಂದ 31ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಒಟ್ಟು 25 ದಿನ ಕಲಾಪ ನಡೆಯಲಿದೆ. ಫೆ.17ರ ಬೆಳಗ್ಗೆ 11ಕ್ಕೆ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅದೇ ದಿನ ಕಲಾಪ ಮುಂದುವರಿದು ನಿಕಟ ಪೂರ್ವ ಅಧಿವೇಶನದ ತರುವಾಯ ನಿಧನರಾದ ಗಣ್ಯ ರಿಗೆ ಸಂತಾಪ ಸೂಚನಾ ನಿರ್ಣಯ ಕೈಗೊಳ್ಳಲಾಗುವುದು. ಫೆ.20ರವರೆಗೆ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಸ್ವೀಕಾರದ ಬಗ್ಗೆ ಚರ್ಚೆ ನಡೆಯಲಿದೆ. ಮಾ. 4ರಿಂದ ಮಾ. 31ರವರೆಗೆ ಪ್ರಶ್ನೋತ್ತರಕ್ಕೆ ದಿನ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದರು.

ಚರ್ಚೆ ನಡೆಸುವ ಉದ್ದೇಶ: ಸಂವಿಧಾನದ ಆಶಯ ಕುರಿತು ಮಾ. 2, 3ರಂದು ವಿಶೇಷ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ನಮ್ಮ ಸಂವಿಧಾನಕ್ಕೆ 1949ರ ನ.26ರಂದು ಒಪ್ಪಿಗೆ ನೀಡಲಾಗಿದ್ದು, 1950ರ ಜ.26ರಿಂದ ಜಾರಿಯಾಗಿದೆ. ಹೀಗಾಗಿ ಸಂವಿಧಾನಕ್ಕೆ ಒಪ್ಪಿಗೆ ನೀಡಿ 70 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ವಿಶೇಷ ಚರ್ಚೆಗೆ ಅವಕಾಶ ನೀಡಲಾಗಿದೆ. ಸಂವಿಧಾನದ ಆಶಯ, ವಿಶೇಷತೆ, ಮುಖ್ಯಾಂಶಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಮನವಿ ಮಾಡಲಾಗಿದೆ: ವಿಶೇಷ ಚರ್ಚೆ ಸಂದರ್ಭದಲ್ಲಿ ರಾಜಕೀಯೇತರವಾಗಿ ಚರ್ಚೆಯಾಗುವಂತೆ ಎಚ್ಚರ ವಹಿಸಲಾಗುವುದು. ಸಂವಿಧಾನದ ವಿಶೇಷತೆ, ರಚನಾ ಸಮಿತಿ ಆಶಯ, ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಪಾತ್ರದ ಬಗ್ಗೆ ಹೆಚ್ಚು ಚರ್ಚೆಗೆ ಅವಕಾಶ ನೀಡಲಾಗುವುದು. ಸಂವಿಧಾನದ ಮೂಲ ಆಶಯದ ಬಗ್ಗೆ ಹೆಚ್ಚು ಮನನ ಮಾಡಲು ಪ್ರಯತ್ನಿಸಲಾಗುವುದು. ಎಲ್ಲ ಜನಪ್ರತಿನಿಧಿಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಉಪಸ್ಥಿತರಿದ್ದರು.

Advertisement

ಮಂಡನೆಗೆ ಬಾಕಿಯಿರುವ ವಿಧೇಯಕಗಳು
* ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ, 2020

* ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ವಿಧೇಯಕ, 2020

* ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ, 2020

* ಕರ್ನಾಟಕ ರಾಜಭಾಷಾ (ತಿದ್ದುಪಡಿ) ವಿಧೇಯಕ, 2020

* ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2020

* ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ, 2020, ಪರ್ಯಾಲೋಚನೆ, ಅಂಗೀಕಾರಕ್ಕೆ ಬಾಕಿ ಇರುವ ವಿಧೇಯಕ

* ಕರ್ನಾಟಕ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ, 2018.

Advertisement

Udayavani is now on Telegram. Click here to join our channel and stay updated with the latest news.

Next