ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ಕಂಡಿರುವುದಾಗಿ ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.
ಶುಕ್ರವಾರ ಜೋಗುಪಾಳ್ಯ ಮತ್ತು ಶಾಂತಿನಗರದ ವಾರ್ಡ್‌ಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದ ಅವರು,ಮಾದರಿ ಕ್ಷೇತ್ರದ ಕಲ್ಪನೆಯನ್ನು ಮತದಾರರ ಮುಂದಿಟ್ಟರು. ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮತ್ತಷ್ಟು ಗಮನ ಹರಿಸುವುದಾಗಿ ತಿಳಿಸಿದರು.
ಶಾಂತಿನಗರ ಕ್ಷೇತ್ರವ್ಯಾಪಿ ಬರುವ ಎಲ್ಲಾ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಬಡವರ ಮತ್ತವರ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ. ಕೊಳಗೇರಿ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತಷ್ಟು ಕಾರ್ಯ ಮಾಡುವೆ.
ಕಳೆದ ಬಾರಿ ನುಡಿದಂತೆ ನಡೆದುಕೊಂಡಿದ್ದು, ಮುಂದೆ ಕೂಡ ಅದೇ ಹಾದಿಯಲ್ಲಿ ನಡೆಯುತ್ತೇನೆ ಎಂದು ಹ್ಯಾರೀಸ್ ಕ್ಷೇತ್ರದ ಮತದಾರರಿಗೆ ಭರವಸೆ ನೀಡಿದರು. ಮುಂದಿನ ಐದು ವರ್ಷದೊಳಗೆ ಕಳ್ಳತನ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣಹಾಕುತ್ತೇನೆ.ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಟ್ಟು ಕ್ಷೇತ್ರ ಅಭಿವೃದ್ದಿಗೆ ಪಣ ತೊಡುವುದಾಗಿ ತಿಳಿಸಿದರು.
ಇದೇ ವೇಳೆ ಅಲ್ಲಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ತಮ್ಮ ಬೆಂಬಲಿಗರ ಗುಂಪು ಸಭೆಗಳನ್ನು ನಡೆಸಿದ ಹ್ಯಾರೀಸ್, ತಾವು ಶಾಸಕರಾಗಿದ್ದ ವೇಳೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾಗಿ ಜನತೆಗೆ ಮನವರಿಕೆ ಮಾಡಿಕೊಟ್ಟರು. ರೋಷನ್ ಗಾರ್ಡನ್ ಮತ್ತು ನೀಲಸಂದ್ರದಲ್ಲಿ ನಡೆದ ಪಾದಯಾತ್ರೆ ವೇಳೆ ಹ್ಯಾರೀಸ್ ಅವರಿಗೆ ಸ್ಥಳೀಯರು ಆರತಿ ಬೆಳಗಿ ಸ್ವಾಗತಿಸಿದರು.