Advertisement
ರಾಜಧಾನಿಯ ಹಲವು ಬಡಾವಣೆಗಳಲ್ಲಿ ನವರಾತ್ರಿ ಆಚರಿಸುತ್ತಿದ್ದರೂ, ಜೆ.ಸಿ.ನಗರ ದಸರಾ ಉತ್ಸವ ತನ್ನದೇ ಸ್ಥಾನಮಾನ ಪಡೆದಿದೆ. ಜೆ.ಸಿ.ನಗರ ದಸರಾ ಮಹೋತ್ಸವದಲ್ಲಿ ಸುತ್ತಮುತ್ತಲ ಪ್ರದೇಶಗಳಿಂದ ಅಲಂಕೃತ ರಥಗಳಲ್ಲಿ ಉತ್ಸವ ಮೂರ್ತಿ ಹೊತ್ತು ಬಂದಿದ್ದ ತೇರು, ಪಲ್ಲಕ್ಕಿ ಕಂಡು ಭಕ್ತರು ಪುಳಕಿತರಾದರು. ಈ ಉತ್ಸವಕ್ಕೆ ತಡರಾತ್ರಿ ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಜೆ.ಸಿ. ನಗರದ ಮುಖ್ಯ ರಸ್ತೆಯಲ್ಲಿ ಮಾಹೇಶ್ವರಮ್ಮ ದೇವಾಲಯದಿಂದ ಹೊರಟಿದ್ದ ಮಹಾರಾಜ ಪಲ್ಲಕ್ಕಿಯ ಹಿಂದಿನಿಂದ ಉಳಿದ ಎಲ್ಲ ಪಲ್ಲಕ್ಕಿಗಳೂ ಸಾಲಾಗಿ ಸಾಗಿದವು.
Related Articles
Advertisement
ತಮಟೆ ಸದ್ದು, ಭಕ್ತಿ ಗೀತೆಗೆ ಪರವಶರಾದ ಜನ: ಜೆ.ಸಿ.ನಗರ ದಸರಾ ಮೆರವಣಿಗೆ ಸಾಗುತ್ತಿದ್ದ ಬಡಾವಣೆಗಳಲ್ಲೆಲ್ಲಾ ತಮಟೆ ಸದ್ದು ಮೈ ನವಿರೇಳಿಸಿದರೆ, ಭಕ್ತಿ ಗೀತೆಗಳು, ಪ್ರಸಿದ್ದ ಚಲನಚಿತ್ರ ಹಾಡುಗಳು, ವಾದ್ಯದ ಕರತಾಡನಗಳಿಗೆ ಜನ ಮಾರು ಹೋಗಿ ನಿಂತಲ್ಲೆ ಹೆಜ್ಜೆ ಹಾಕಿದರು. ಇದರೊಂದಿಗೆ ವಿವಿಧ ವೇಷ ತೊಟ್ಟ ನೃತ್ಯ ರೂಪಕಗಳು ಮೆರವಣಿಗೆಯುದ್ದಕ್ಕೂ ಸಾಗಿ ದಸರಾ ಆಕರ್ಷಣೆ ಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದವು.
ಶತಮಾನದ ಇತಿಹಾಸ :
ಶತಮಾನದಷ್ಟು ಹಳೆಯದಾದ ಜೆ.ಸಿ.ನಗರ ನವರಾತ್ರಿ ಉತ್ಸವವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇತರ ಧರ್ಮಗಳ ಭಾವೈಕ್ಯತೆಗೂ ಸಾಕ್ಷಿಯಾಗಿದೆ. 80ರ ದಶಕದವರೆಗೂ ಇಲ್ಲಿ ಸಣ್ಣದಾಗಿ ನಡೆಯುತ್ತಿದ್ದ ದಸರಾ ನಂತರದ ವರ್ಷಗಳಲ್ಲಿ ವಿಜಯದಶಮಿಯಂದು ವೈಭವ ಪಡೆಯುತ್ತಾ ಬಂದಿದೆ. ನವರಾತ್ರಿಯ ಕೊನೆಯ ದಿನದಂದು ನಡೆಯುವ ದೇವರ ಪಲ್ಲಕ್ಕಿ ಮೆರವಣಿಗೆ ಇಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ ಎಲ್ಲ ಸಮುದಾಯದವರೂ ದಸರಾ ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುವುದು ವಿಶೇಷತೆಯಾಗಿದೆ. ಈ ಬಾರಿ 111ನೇ ವರ್ಷದ ದಸರಾ ಉತ್ಸವ ನಡೆಯುತ್ತಿದೆ.
ಬನ್ನಿ ಮರಕ್ಕೆ ಪೂಜೆ ಬಳಿಕ ಮೆರವಣಿಗೆ :
ಹೆಬ್ಟಾಳ, ಬೋಳನಾಯಕನಹಳ್ಳಿ, ದಿನ್ನೂರು, ಕಾವಲ್ ಭೈರಸಂದ್ರ, ಗಂಗಾನಗರ, ಸುಲ್ತಾನ್‌ಪಾಳ್ಯ, ಮನೋರಾಯನಪಾಳ್ಯ, ನಂದಿದುರ್ಗ ರಸ್ತೆ, ಜೆ.ಸಿ. ನಗರ ಸೇರಿ ಬೆಂಗಳೂರಿನ ವಿವಿಧ ಭಾಗಗಳ ಸುತ್ತ-ಮುತ್ತಲ ಊರುಗಳಿಂದ ಬರುವ ಪಲ್ಲಕ್ಕಿಗಳು ಜೆ.ಸಿ.ನಗರದ ದಸರಾ ಮೈದಾನದಲ್ಲಿ ಸೇರುತ್ತವೆ. ನಂತರ ಬನ್ನಿಮರ ಪೂಜೆ ಮಾಡಿದ ಬಳಿಕ ಬನ್ನಿ ಕಡಿದ ಬಳಿಕ ಎಲ್ಲ ದೇವತೆಗಳು ಮೆರವಣಿಗೆಯಲ್ಲಿ ಪಲ್ಲಕ್ಕಿಗಳ ಮೂಲಕ ಜೆ.ಸಿ.ನಗರ ಮುಖ್ಯ ರಸ್ತೆ ಮೂಲಕ ಆಯಾ ಗ್ರಾಮಗಳಿಗೆ ಹೋಗುತ್ತದೆ. ಶನಿವಾರ ರಾತ್ರಿ ಶುರುವಾದ ಮೆರವಣಿಗೆ ಭಾನುವಾರ ಮುಂಜಾನೆವರೆಗೂ ನಿರಂತರವಾಗಿ ನಡೆಯುತ್ತದೆ. ಆಯಾ ಗ್ರಾಮಗಳಲ್ಲಿ ಭಾನುವಾರ ಸಂಜೆವರೆಗೂ ದಸರಾ ಉತ್ಸವ ನಡೆಯುತ್ತದೆ. ದಸರಾ ಉತ್ಸವಕ್ಕೆ ಸರ್ಕಾರವು ಈ ವರ್ಷ 70 ಲಕ್ಷ ರೂ. ಅನುದಾನ ನೀಡಿದೆ ಎಂದು ದಸರಾ ಉತ್ಸವದ ಸಂಘಟನಾ ಕಾರ್ಯದರ್ಶಿ ಆರ್.ಪ್ರಕಾಶ್ ರಾವ್ “ಉದಯವಾಣಿ’ಗೆ ಮಾಹಿತಿ ನೀಡಿದರು.