Advertisement

ಸಮಾಜ ಸೇವಕ ರಫೀಕ್ ಬಡೇಘರ್ ಅವರ ಮಾದರಿ ಕಾರ್ಯ

06:51 PM Sep 30, 2021 | Team Udayavani |

ಬೈಲಹೊಂಗಲ : ಅನಾಥ ವೃದ್ಧ ದಂಪತಿ ಅನುಭವಿಸುತ್ತಿರುವ ಸಂಕಷ್ಟವನ್ನು ಮನಗಂಡು ಅವರ ನೆರವಿಗೆ ಧಾವಿಸುವುದರ ಮೂಲಕ ಸಾಮಾಜಿಕ ಕಾರ್ಯಕರ್ತ ರಫೀಕ್ ಬಡೇಘರ್ ಅವರು ಮಾದರಿ ಎನಿಸಿಕೊಂಡಿದ್ದಾರೆ.

Advertisement

ಅನಾಥ ವೃದ್ಧ ದಂಪತಿಗಳಾದ ಮೂಲತ: ಮಹಾರಾಷ್ಟ್ರದ ಇಂಚಲಕರಜಿಯವರಾದ ಬಸವರಾಜ ಮಲಕಾಜಪ್ಪ ಸೊಲಾಪೂರೆ ಮತ್ತು ಸಾವಿತ್ರಿ ಬಸವರಾಜ ಸೊಲಾಪೂರೆ ಅವರು ಬೆಳಗಾವಿಯ  ವೃದ್ಧಾಶ್ರಮದಲ್ಲಿನ ವ್ಯವಸ್ಥೆಯ ಕುರಿತು ಬೇಸರ ವ್ಯಕ್ತಪಡಿಸಿ, ವೃದ್ಧಾಶ್ರದಲ್ಲಿ ನಿಷ್ಕಾಳಜಿ ತೋರುತ್ತಿದ್ದು, ಸರಿಯಾದ ಊಟ, ಚಿಕಿತ್ಸೆ ಸಿಗುತ್ತಿಲ್ಲ. ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ. ನಮ್ಮ ಮಾತು ಕೇಳುವವರು ಯಾರೂ ಇಲ್ಲ. ಏನಾದರೂ ಹೇಳಲು ಹೋದರೆ ನಮ್ಮ ಮಾತಿಗೆ ಬೆಲೆಯೇ ಇಲ್ಲ ಎಂದು ನೋವು ತೋಡಿಕೊಂಡಿದ್ದರು.

ತೀವ್ರವಾಗಿ ನೊಂದಿದ್ದ ವೃದ್ಧ ದಂಪತಿ ಬೈಲಹೊಂಗಲಕ್ಕೆ ಬಂದಿದ್ದರು. ರಫೀಕ್ ಬಡೇಘರ್ ಅವರು ಅವರಿಗೆ ಬಾಡಿಗೆ ಮನೆ ಕೊಡಿಸಿ, ಸ್ವಂತ ಹೂವು -ಹಣ್ಣಿನ ಅಂಗಡಿ ಹಾಕಿ ಕೊಟ್ಟು ಜೀವನೋಪಾಯಕ್ಕೆ ನೆರವಾಗಿದ್ದಾರೆ.

ವ್ಯಾಪಾರಕ್ಕಾಗಿ ಅಂಗಡಿಯ ಮುಂದೆ ಬ್ಯಾನರ್ ಹಾಕಿದ್ದು ‘ನಾವು ಅನಾಥರಿದ್ದು ತಾವುಗಳು ನಮ್ಮ ಅಂಗಡಿಯಲ್ಲಿ ಹೂವು. ಹಣ್ಣು-ಹಂಪಲು ಖರೀದಿ ಮಾಡಿ, ನಮಗೆ ಸಹಾಯ ಮಾಡಿರಿ ಎನ್ನುವ ಬ್ಯಾನರ್ ಹಾಕಿಕೊಂಡು ವ್ಯಾಪಾರ-ವಹಿವಾಟು ನಡೆಸುತ್ತಿದ್ದೇವೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವೈದ್ಯ ಸಾಹಿತಿ ಡಾ.ಎಸ್.ಎಸ್.ದೇವಲಾಪೂರ ಅವರು ಅನಾಥ ವೃದ್ಧ ದಂಪತಿಯ ಚಿಕಿತ್ಸೆಯನ್ನು ಉಚಿತವಾಗಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ್ದಾರೆ.

Advertisement

ವೃದ್ಧಾಶ್ರಮಗಳಲ್ಲಿ ಅನಾಥರಿಗೆ, ಬುದ್ಧಿಮಾಂಧ್ಯರಿಗೆ, ಅಂಗವಿಕಲರಿಗೆ ಸರಿಯಾದ ಊಪಚಾರ, ಕಾಳಜಿ ಮಾಡದೆ ಅಮಾನವೀಯ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಅಧಿಕಾರಗಳ ದಿವ್ಯ ನಿರ್ಲಕ್ಷತನದಿಂದ ಅನಾಥರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ, ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಂಗವೀಕಲರ ಇಲಾಖೆಗೆ ಸರಕಾರ ಕೋಟ್ಯಾಂತರ ರೂ.ಹಣ ಖುರ್ಚು ಮಾಡುತ್ತಿರುವುದು ಯಾವ ಉದ್ದೇಶಕ್ಕಾಗಿ. ಅನಾಥರಿಗೆ ಸರಿಯಾದ ಊಟ, ಚಿಕಿತ್ಸೆ, ವಸತಿ ನೀಡದ ಅಮಾನವೀಯ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಿ ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಬೇಕು.
ರಫೀಕ್ ಬಡೇಘರ, ಸಾಮಾಜಿಕ ಕಾರ್ಯಕರ್ತರು, ಬೈಲಹೊಂಗಲ

ನಾವು ಅನಾಥ ದಂಪತಿಗಳು ನಮಗೆ ಯಾರೂ ದಿಕ್ಕಿಲ್ಲ. ವೃದ್ಧಾಶ್ರಮಗಳಲ್ಲಿ ನಮ್ಮನ್ನು ಕೀಳಾಗಿ ಕಾಣುತ್ತಾರೆ. ಸರಿಯಾದ ಊಟ, ವಸತಿ, ಚಿಕಿತ್ಸೆ ನೀಡದೆ ನಾಯಿಗಿಂತ ಕಡೆಯಾಗಿ ನೋಡುತ್ತಾರೆ. ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ್ ಅವರು  ಬಾಡಿಗೆ ಮನೆ ಕೊಡಿಸಿ, ಜೀವನೋಪಾಯಕ್ಕಾಗಿ ಅಂಗಡಿ ಹಾಕಿಕೊಟ್ಟು ಸಮಾಜದಲ್ಲಿ ಬದುಕಲು ಹೇಳಿಕೊಟ್ಟಿದ್ದಾರೆ. ನಮ್ಮೆಲ್ಲ ಕಷ್ಟಗಳಿಗೆ ಬೆನ್ನೆಲುಬಾಗಿ ನಿಲ್ಲುವೆ ಎಂದು ಹೇಳಿದ್ದರಿಂದ ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ.

ಬಸವರಾಜ ಸೊಲಾಪೂರೆ ಅನಾಥ ವೃದ್ಧ

ವರದಿ: ಸಿ.ವೈ.ಮೆಣಸಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next