Advertisement

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

11:02 PM Apr 17, 2024 | Team Udayavani |

ಬೆಳ್ತಂಗಡಿ: ಮೂಲಸೌಕರ್ಯಗಳಿಲ್ಲ ಎಂದು ಆರೋಪಿಸುತ್ತ ಮತದಾನ ಬಹಿಷ್ಕರಿಸುವವರ ಮಧ್ಯೆ ಯಾವುದೇ ಸವಲತ್ತು ಮರೀಚಿಕೆಯಾಗಿರುವ ನೆರಿಯ ಗ್ರಾಮದ ಬಾಂಜಾರು ಮಲೆ ಮತ್ತು ಎಳನೀರು ಗ್ರಾಮಗಳ ಜನತೆ ಸ್ವಯಂಪ್ರೇರಿತರಾಗಿ ಶೇ. 100 ಮತದಾನ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಊರಿನ ಜನತೆ ರಾಷ್ಟ್ರಕ್ಕೇ ಮಾದರಿಯಾಗಿದ್ದಾರೆ.

Advertisement

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಸಂದರೂ ಮತದಾನ ಜಾಗೃತಿ ಇಂದಿಗೂ ಅನಿವಾರ್ಯವಾಗಿದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಶೇ. 100 ಮತದಾನದ ಗುರಿಹೊತ್ತು ಚುನಾವಣ ಇಲಾಖೆ ಹಾಗೂ ತಾಲೂಕು ಸ್ವೀಪ್‌ ಸಮಿತಿ ವಿಭಿನ್ನ ಪ್ರಯತ್ನಗಳೊಂದಿಗೆ ಮತದಾರರ ಮನವೊಲಿಸುವ ಸತತ ಪ್ರಯತ್ನದಲ್ಲಿವೆ. ಕೆಲವು ಕಡೆಗಳಲ್ಲಿ ಯುವ ಮತದಾರರು ಮತದಾನದಿಂದ ದೂರ ಇರುತ್ತಾರೆ ಎಂಬ ಆರೋಪದ ನಡುವೆ ಇಲ್ಲಿ ಮುಖ್ಯವಾಗಿ ಯುವ ಜನರೇ ಮುತುವರ್ಜಿ ವಹಿಸಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.

ನೆರಿಯ ಗ್ರಾಮದ ಬಾಂಜಾರು ಮಲೆ ಮತಗಟ್ಟೆ ಸಂಖ್ಯೆ 86, ಮಲವಂತಿಗೆ ಗ್ರಾಮದ ಎಳನೀರು ಮತಗಟ್ಟೆ ಸಂಖ್ಯೆ 15ರಲ್ಲಿ ತಾಲೂಕು ಸ್ವೀಪ್‌ ಸಮಿತಿ ವತಿಯಿಂದ ಊರವರೊಂದಿಗೆ ಅನೇಕ ಸುತ್ತಿನ ಭೇಟಿ, ಸಭೆ ನಡೆಸಿ ಪೋಸ್ಟರ್‌ ಅಭಿಯಾನ ನಡೆಸಲಾಗಿತ್ತು. ಜತೆಗೆ ವಿಶೇಷ ಮತ್ತು ಅನನ್ಯ ಮತಗಟ್ಟೆ ಎಂದು ಪರಿಗಣಿಸಿ ಮತದಾರರಿಗೆ ಅರಿವು ಮೂಡಿಸಿತ್ತು. ಇದರಿಂದ ಪ್ರೇರಿತರಾದ ಜನತೆ ತಾವಾಗಿಯೇ ಶೇ. 100 ಮತದಾನದ ಭರವಸೆ ನೀಡಿ ಮಾದರಿ ನಡೆ ತೋರಿದ್ದಾರೆ.

ಇಲ್ಲಿದೆ ಡಿಸಿ ಕಟ್ಟೆ!: ಬಾಂಜಾರು ಮಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿ ಪೊನ್ನುರಾಜ್‌ ಆಡಳಿತಾವಧಿಯಲ್ಲಿ ಊರಿನವರೇ ಇಲ್ಲೊಂದು ಡಿಸಿ ಕಟ್ಟೆ ರಚಿಸಿದ್ದರು. ದ.ಕ. ಜಿಲ್ಲೆಯ ಯಾವುದೇ ಜಿಲ್ಲಾಧಿಕಾರಿ ಇಲ್ಲಿಗೆ ಆಗಮಿಸಿದಲ್ಲಿ ಊರವರೊಂದಿಗೆ ಸಭೆ ನಡೆಸಲು ನಿಗದಿಯಾಗಿರುವ ಸ್ಥಳವೇ ಡಿಸಿ ಕಟ್ಟೆ. ಈ ಬಾರಿಯೂ ಜಿಲ್ಲಾಧಿಕಾರಿ ಒಮ್ಮೆ ಭೇಟಿ ನೀಡ ಬೇಕೆಂಬುದು ಊರವರ ಇಚ್ಛೆ.

ಒಟ್ಟು ಮತದಾರರು
ನೆರಿಯ ಗ್ರಾಮದ ಬಾಂಜಾರು ಮಲೆಯಲ್ಲಿ 150ಕ್ಕೂ ಅಧಿಕ ಜನಸಂಖ್ಯೆ ಇದ್ದು ಈ ಪೈಕಿ 51 ಮಹಿಳೆ, 60 ಸೇರಿ ಒಟ್ಟು 111 ಮತದಾರರಿದ್ದಾರೆ. 2019ರಲ್ಲಿ ಇಲ್ಲಿ ಶೇ. 99.06 ಮತದಾನವಾಗಿ ಜಿಲ್ಲೆಗೆ ಮಾದರಿಯಾಗಿತ್ತು. ಮಲವಂತಿಗೆ ಗ್ರಾಮದ ಎಳನೀರಿನಲ್ಲಿ 148 ಮಹಿಳೆ, 116 ಪುರುಷರು ಸೇರಿ 464 ಮತದಾರರಿದ್ದಾರೆ. ಕಳೆದ ಬಾರಿ ಇಲ್ಲಿ ಶೇ. 83.01 ಮತದಾನವಾಗಿತ್ತು.

Advertisement

ಮತದಾರರಿಗೆ
ಊಟ, ಉಪಾಹಾರ
ನಿಮ್ಮ ಮತ ನಿಮ್ಮ ಹಕ್ಕು. ನಿಮ್ಮ ಇಷ್ಟದ ಅಭ್ಯರ್ಥಿ, ಪಕ್ಷಕ್ಕೆ ಮತ ಹಾಕಿ. ಆದರೆ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ನಿಜವಾದ ಯಜಮಾನರಾಗಿ ಎಂದು ಕರೆ ಕೊಡಲಾಗಿದೆ. ಎ. 26ರಂದು ಬಾಂಜಾರುಮಲೆಯ ಮತಗಟ್ಟೆಗೆ ಬರುವ ಮತದಾರರಿಗೆ ಇಲ್ಲಿನ ಸಮುದಾಯ ಭವನದಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ ಸಹಿತ ಆಹಾರವನ್ನು ಊರವರೇ ಸಿದ್ಧಪಡಿಸಿ ಹಬ್ಬದಂತೆ ಆಚರಿಸಲು ಮುಂದಾಗಿದ್ದಾರೆ.
– ವೈಜಣ್ಣ,
ತಾಲೂಕು ಕಾರ್ಯನಿರ್ವಹಣಾಧಿಕಾರಿ, ಸ್ವೀಪ್‌ ಸಮಿತಿ ಅಧ್ಯಕ್ಷ

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next