ಗುಳೇದಗುಡ್ಡ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶಾಸಕರ ಮಾದರಿ ಶಾಲೆಯನ್ನು ಎಸ್‌ಡಿಎಂಸಿ ಹಾಗೂ ಶಿಕ್ಷಕರ ಶ್ರಮದಿಂದ ಹೊಸ ಆಕರ್ಷಕ ಚಿತ್ತಾರಗಳೊಂದಿಗೆ ಕಂಗೊಳಿಸುತ್ತಿದ್ದು, ಮಕ್ಕಳು ಶಾಲೆಯತ್ತ ಮುಖ ಮಾಡುವಂತೆ ಮಾಡಿದೆ. ಶಾಲೆಯ ಗೋಡೆಗಳ ಮೇಲೆ ಬಣ್ಣದ ಬಸ್ ಹಾಗೂ ರೈಲಿನ ಚಿತ್ರಗಳನ್ನು ಬಿಡಿಸಿ, ಮಕ್ಕಳಿಗೆ ಶಾಲೆ ಪ್ರಾರಂಭವಾಗಿದೆ ಬನ್ನಿ ನಮ್ಮ ಶಾಲೆಗೆ ಎಂದು ಕೈ ಬೀಸಿ ಕರೆಯುವಂತಾಗಿದೆ.
ಮೊದಲು ಶಿಥಿಲ ಕಟ್ಟಡ: ಈ ಶಾಸಕರ ಸರ್ಕಾರಿ ಮಾದರಿ ಶಾಲೆ ಈ ಹಿಂದೆ ಸಾಕಷ್ಟು ಶಿಥಿಲಾವಸ್ಥೆಯಲ್ಲಿತ್ತು. ಶಾಲೆಯ ಗೋಡೆ, ಮೇಲ್ಛಾವಣಿ, ಕಿಟಕಿ, ಬಾಗಿಲುಗಳು ಕೆಟ್ಟು ಹೋಗಿದ್ದವು. ಹಾಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯನ್ನು ದುರಸ್ತಿಗೊಳಿಸಿ ಶಾಲೆಗೆ ಸುಣ್ಣ ಬಣ್ಣ ಹಚ್ಚಿ ಶಾಲೆಯ ಎಲ್ಲ ಗೋಡೆಗಳಿಗೆ ಮಕ್ಕಳ ಆಕರ್ಷಣಿಯ ರೈಲು, ಬಸ್ ಚಿತ್ರ ಬಿಡಿಸಲಾಗಿದ್ದು, ಮಕ್ಕಳ ಹಾಗೂ ಪಾಲಕರ ಆಕರ್ಷಣೆಗೆ ಕಾರಣವಾಗಿವೆ.
6 ಲಕ್ಷದಲ್ಲಿ ನೂತನ ಸ್ಪರ್ಶ: ಶಾಲಾ ದುರಸ್ತಿ ಅನುದಾನದಲ್ಲಿ ಸುಮಾರು 6 ಲಕ್ಷ ಖರ್ಚು ಮಾಡಿ, ಶಾಲೆಯ ಗೊಡೆಗಳ ಮೇಲೆ ಆಕರ್ಷಕ ಹಾಗೂ ಸುಂದರವಾದ ಚಿತ್ರಗಳನ್ನು ಇಲ್ಲಿ ಬಿಡಿಸಲಾಗಿದೆ. ಇಳಕಲ್ಲಿನ ಕಲಾವಿದ ಉಮೇಶ ಇಲ್ಲಿನ ಗೋಡೆಗಳ ಮೇಲೆ ನಯನ ಮನೋಹರ ಬಣ್ಣ ಬಣ್ಣದ ಆಕರ್ಷಕ ರೈಲು ಹಾಗೂ ಚಂದದ ಬಸ್ಸಿನ ಚಿತ್ರಗಳನ್ನು ಬಿಡಿಸಿದ್ದು ಅವುಗಳು ಸದ್ಯ ರಸ್ತೆಯ ಮೇಲೆ ಚಲಿಸುತ್ತಿವೆ ಎನ್ನುವಂತೆ ಭಾಸವಾಗುತ್ತಿವೆ. ಮಕ್ಕಳು ದಿನಂಪ್ರತಿ ಬಸ್, ರೈಲು ಹತ್ತುವ ಮೂಲಕ ಶಾಲೆಯಲ್ಲಿ ಪಾಠ ಪ್ರವಚನ ಆಲಿಸುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಬಸವನಗೌಡ ಪಾಟೀಲ ಹಾಗೂ ಶಾಲಾ ಶಿಕ್ಷಕ ವರ್ಗದವರ ಸಹಕಾರ ಮತ್ತು ಶಾಲಾ ಎಸ್‌ಡಿಎಂಸಿ ಸದಸ್ಯರ ಪ್ರೇರಣೆಯೇ ಅಂದ-ಚಂದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಶಾಲಾ ಶಿಕ್ಷಕರು.
ಮಕ್ಕಳೊಂದಿಗೆ ಮಕ್ಕಳಾದ ಬಿಇಒ: ಶಾಸಕರ ಮಾದರಿ ಶಾಲೆಯ ಗೋಡೆಗಳಿಗೆ ರೈಲು-ಬಸ್ ಚಿತ್ರ ಬಿಡಿಸಿ ಆಕರ್ಷಕಗೊಳಿಸಿದ್ದಕ್ಕೆ ಬಣ್ಣದ ರೈಲಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ ಅವರು ಶಾಲೆಗೆ ಭೇಟಿ ನೀಡಿ ರೈಲು ಬಂಡಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ರೈಲು ಬಸ್ ಗಳನ್ನು ಹತ್ತುವ ರೀತಿಯಲ್ಲಿ ಕೊಠಡಿಗಳ ಒಳಗಡೆ ನಿಂತು ಕೆಲ ಸಮಯ ಮಕ್ಕಳ ಜೊತೆ ಮಕ್ಕಳಂತಾದರು. ಈಗ ಖಾಸಗಿ ಶಾಲೆಗೆ ಪೈಪೋಟಿ ಒಡ್ಡುವ ರೀತಿಯಲ್ಲಿ ಶಾಲೆಯಲ್ಲಿ ಆಕರ್ಷಕ ಚಿತ್ರ ರಚನೆ ಮಾಡಿ ಅದರೊಂದಿಗೆ ಉತ್ತಮ ಗುಣಮಟ್ಟದ ಪಾಠ ಬೋಧನೆ ಮಾಡಲಾಗುತ್ತಿದೆ.
ಶಾಸಕರ ಮಾದರಿ ಶಾಲೆಯನು ಮಾದರಿಯಾಗಿ ಮಾಡುತ್ತಿದ್ದೇವೆ. ಶಾಸಕರ ಮಾದರಿ ಶಾಲೆಗೆ ಸುಮಾರು 6ಲಕ್ಷ ರೂ ಖರ್ಚಾಗಿದೆ. ಇದರಿಂದ ನಮ್ಮ ಶಾಲೆ ಹಳೆದಾದರೂ ಬಣ್ಣಗಳ ಚಿತ್ರಗಳ ಆಕರ್ಷಣಿಯವಾಗಿದೆ. ಇದರಿಂದ ಶಿಕ್ಷಕರಿಗೆ ಖುಷಿಯಾಗಿದೆ. –
ಬಸವನಗೌಡ ಪಾಟೀಲ ಶಾಲಾ ಮುಖ್ಯಶಿಕ್ಷಕ