Advertisement

ಮಧ್ಯ ಆದರ್ಶ ಗ್ರಾಮ ಯೋಜನೆಗೆ ಚಾಲನೆ

08:05 AM Jul 30, 2017 | Karthik A |

ಸುರತ್ಕಲ್‌: ಆದರ್ಶ ಗ್ರಾಮ ನಿರ್ಮಾಣ ಸವಾಲಿನ ಕೆಲಸವಾಗಿದ್ದು ಪಾನಮುಕ್ತ, ತ್ಯಾಜ್ಯಮುಕ್ತ, ಹೊಗೆಮುಕ್ತ ಗ್ರಾಮವನ್ನಾಗಿ ಮಾಡಲು ಸಂಕಲ್ಪ ಮಾಡಿದಾಗ ಆ ಗ್ರಾಮ ಸರ್ವ ವಿಧದಲ್ಲೂ ಅಭಿವೃದ್ಧಿಯಾಗುತ್ತದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಸುರತ್ಕಲ್‌ ಸಮೀಪದ ಮಧ್ಯ ಗ್ರಾಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸದಸ್ಯೆ ಕಸ್ತೂರಿ ಪಂಜ ಅವರ ನೇತೃತ್ವದಲ್ಲಿ ಆದರ್ಶ ಗ್ರಾಮವನ್ನಾಗಿ ಮಾಡಲು ರೂಪಿಸಿದ ಯೋಜನೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಂತೆ ಸಂಸದರು ಐದು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಬೇಕೆಂಬ ಸಂಕಲ್ಪವಿದ್ದರೂ ನಾನು ಕನಿಷ್ಠ ಮೂರು ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದೇನೆ. ಬಳ್ಪ ಗ್ರಾಮಕ್ಕೆ 20 ಕೋ.ರೂ. ವೆಚ್ಚದಲ್ಲಿ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು ಈವರೆಗೆ 6 ಕೋ.ರೂ. ಖರ್ಚು ಮಾಡಲಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ, ಶಿಕ್ಷಣ, ವಿದ್ಯುತ್‌ ಸಂಪರ್ಕ, ದೂರವಾಣಿ ಸೌಲಭ್ಯದ ಕನಸನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.

ಮಧ್ಯ ಗ್ರಾಮವನ್ನು ತನ್ನ ಕನಸಿನ ಆದರ್ಶ ಗ್ರಾಮವನ್ನಾಗಿ ಮಾಡಲು ಮುಂದಾಗಿರುವ ಕಸ್ತೂರಿ ಪಂಜ ಅವರ ಯೋಜನೆ ರಾಜ್ಯ, ದೇಶಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದ ನಳಿನ್‌, ಈ ಕಾರ್ಯಕ್ಕೆ ತನ್ನಿಂದಾದ ಸರ್ವ ನೆರವನ್ನು ಒದಗಿಸುವೆ ಎಂದು ಭರವಸೆ ನೀಡಿದರು.

5 ಲ.ರೂ. ಘೋಷಿಸಿದ ಕೋಟ
ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಆದರ್ಶ ಮಧ್ಯ ಗ್ರಾಮದ ಯೋಜ ನೆಗೆ 5 ಲ.ರೂ. ನೆರವನ್ನು ಘೋಷಿಸಿದರಲ್ಲದೆ ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಮುನ್ನಡೆಯುವಂತೆ ಸಲಹೆ ನೀಡಿದರು. ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಆದರ್ಶ ಗ್ರಾಮ ನಿರ್ಮಾಣಕ್ಕೆ ಗ್ರಾಮಸ್ಥರು ಸರ್ವವಿಧದಲ್ಲೂ ಸಹಕರಿಸುವಂತೆ ಮನವಿ ಮಾಡಿದರು.

ಚೇಳಾçರು ಗ್ರಾ.ಪಂ. ಅಧ್ಯಕ್ಷ ಜಯಾನಂದ್‌ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ವಿನೋದ್‌ ಬೆಳ್ಳೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿ.ಪ್ರ. ಕಾರ್ಯದರ್ಶಿ ಉಮಾನಾಥ ಕೋಟ್ಯಾನ್‌, ಸುದರ್ಶನ್‌, ಮಾಜಿ ಜಿ.ಪಂ. ಸದಸ್ಯ ಈಶ್ವರ ಕಟೀಲು, ತಾ.ಪಂ. ಸದಸ್ಯರಾದ ವಜ್ರಾಕ್ಷಿ ಪಿ. ಶೆಟ್ಟಿ, ಶಶಿಕಲಾ ಶೆಟ್ಟಿ, ಎಪಿಎಂಸಿ ಸದಸ್ಯೆ ರಜನೀ ದುಗ್ಗಣ್ಣ, ಬಿಜೆಪಿ ಪ್ರ. ಕಾರ್ಯದರ್ಶಿ ಬೃಜೇಶ್‌ ಚೌಟ, ಸುಕೇಶ್‌, ಗಡಿ ಪ್ರಧಾನರಾದ ಶಂಕರ ಹೆಗ್ಡೆ, ವಿವಿಧ ಇಲಾಖಾಧಿ ಕಾರಿಗಳಾದ ರಾಮಕೃಷ್ಣ, ಸುಂದರ ಪೂಜಾರಿ, ವೀಣಾ ಶೆಟ್ಟಿ, ರಾಮಚಂದ್ರ ಭಂಡಾರ್ಕರ್‌, ಡಾ| ಸುಶ್ಮಿತಾ, ನಿತ್ಯಾನಂದ, ಸಂತೋಷ್‌ ಕುಮಾರ್‌ ಶೆಟ್ಟಿ, ಭುವನಾಭಿರಾಮ ಉಡುಪ, ದಿವಾಕರ ಸಾಮಾನಿ, ಭೋಜರಾಜ್‌ ಮತ್ತಿತರರು ಉಪಸ್ಥಿತರಿದ್ದರು. ಚೇಳಾçರು ಗ್ರಾ.ಪಂ. ಮಾಜಿ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ ಸ್ವಾಗತಿಸಿದರು. ದಿನೇಶ್‌ ದೇವಾಡಿಗ, ಹರಿಪ್ರಸಾದ್‌ ನಿರೂಪಿಸಿದರು. ಪಿಡಿಒ ನಿತ್ಯಾನಂದ ವಂದಿಸಿದರು.

Advertisement

474 ಕುಟುಂಬಗಳಿರುವ ಈ ಪುಟ್ಟ ಗ್ರಾಮವು ಒಂದು ಪ್ರಾಥಮಿಕ ಶಾಲೆ, 2 ಅಂಗನವಾಡಿ, 1 ಪ್ರಾಥಮಿಕ ಆರೋಗ್ಯ ಕೇಂದ್ರ, 1 ಬ್ಯಾಂಕ್‌, ನೀರಿನ ವ್ಯವಸ್ಥೆ, ನಿಯಮಿತ ಬಸ್‌ ಸೌಕರ್ಯ ಹೊಂದಿದೆ. ಮೂರ್‍ನಾಲ್ಕು ಮಣ್ಣಿನ ರಸ್ತೆ ಡಾಮರು ಕಾಣಲು ಬಾಕಿಯಿದ್ದು ಪಟ್ಟಣಕ್ಕೆ ಸಂಪರ್ಕ ಜಾಲ ಮತ್ತಷ್ಟು ಉತ್ತಮಗೊಳ್ಳ ಬೇಕಿದೆ. ಗ್ರಾಮದಲ್ಲಿ 24 ಎಸ್‌ಸಿ ಮತ್ತು 83 ಎಸ್‌ಟಿ ಕುಟುಂಬಗಳಿದ್ದು ಅತೀ ದೊಡ್ಡ ಕಾಲನಿ ಹೊಂದಿದೆ. ಅವರಿಗೆ ಪಡಿತರ, ಆಧಾರ್‌, ಮತದಾನದ ಗುರುತು ಪತ್ರ, ಯಶಸ್ವಿನಿ ಯೋಜನೆಯ ಪ್ರಯೋಜನ, ಕೇಂದ್ರದ ಉಚಿತ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ಮಾಡಲಾಗಿದೆ.

ರಾಮರಾಜ್ಯ ಎಂದರೆ, ಅಭಿವೃದ್ಧಿಯಷ್ಟೇ ಅಲ್ಲ. ಆದರ್ಶಯುತ ಸಮಾಜ ನಿರ್ಮಾಣವಾದಾಗ ಮಾತ್ರ ರಾಮರಾಜ್ಯ ಸಾಧ್ಯವಾಗುತ್ತದೆ. ಎಲ್ಲರಿಗೂ ಶಿಕ್ಷಣ ನೀಡಿದಾಗ ಸುಶಿಕ್ಷಿತ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಆಹಾರ, ಕೃಷಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ರೂಪಿಸಿ ಉದ್ಯಮಶೀಲತಾ ಶಕ್ತಿಯನ್ನು ಬೆಳೆಸಿ ಆರ್ಥಿಕವಾಗಿ ಬೆಳೆಸುವುದೇ ಆದರ್ಶ ಗ್ರಾಮದ ಪರಿಕಲ್ಪನೆಯಾಗಿದೆ.
– ನಳಿನ್‌ ಕುಮಾರ್‌ ಕಟೀಲು

Advertisement

Udayavani is now on Telegram. Click here to join our channel and stay updated with the latest news.

Next