Advertisement

ದಾನಿಗಳ ನೆರವು: ಮಾದರಿ ನವಜೀವನ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಸಿದ್ಧ

10:58 AM Dec 23, 2018 | Team Udayavani |

ಬಂಟ್ವಾಳ : ರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಗಳ ಅಂಗನವಾಡಿ ಕೇಂದ್ರವನ್ನು ಹೊಂದಿರುವ ತಾಲೂಕು ಬಂಟ್ವಾಳ. ಇದೀಗ ಅದೇ ಸಾಲಿಗೆ ಸೇರುವ ಇನ್ನೊಂದು ದಾಖಲೆಯೂ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನವಜೀವನ ಅಂಗನವಾಡಿ ಕೇಂದ್ರಕ್ಕೆ ಸಲ್ಲುತ್ತದೆ.

Advertisement

ಸುಮಾರು 18.50 ಲಕ್ಷ ರೂ. ವೆಚ್ಚದಿಂದ ನಿರ್ಮಾಣ ಆಗಿರುವ ಈ ಅಂಗನವಾಡಿ ಕೇಂದ್ರ ದಾನಿಗಳ ಸಹಯೋಗದಲ್ಲಿ 6 ಸಿಲಿಂಗ್‌ ಫ್ಯಾನ್‌, ಒಂದೂವರೆ ಟನ್‌ ತೂಕದ 2 ಎ.ಸಿ. ಯಂತ್ರಗಳು, ಧ್ವಜಸ್ತಂಭ, ಕಿಟಿಕಿ ಬಾಗಿಲಿನ ಕರ್ಟನ್‌, ಟ್ಯೂಬ್‌ಲೈಟ್‌, ಎಲ್‌ಇಡಿ ಬಲ್ಬ್, ನೇತ್ರಾವತಿ ನರ್ಸರಿ ಅವರಿಂದ ಉಚಿತ ಹಸುರೀಕರಣ, ಗೋಡೆ ಪಟ್ಟಿ ಫಿನಿಶ್‌ ಮಾಡಲಾಗಿದೆ. ಎನ್‌ಆರ್‌ಜಿ ಯೋಜನೆಯಲ್ಲಿ ನಿರ್ಮಿತ ಜಿಲ್ಲೆಯ ಪ್ರಥಮ ಅಂಗನವಾಡಿ ಎಂಬ ಕೀರ್ತಿಯೂ ನರಿಕೊಂಬು ಗ್ರಾಮಕ್ಕೆ ಸಲ್ಲುತ್ತದೆ.

ಹವಾನಿಯಂತ್ರಿತ ಸೌಲಭ್ಯ
ಸುಸಜ್ಜಿತ ಈ ಅಂಗನವಾಡಿ ಡಿ. 24 ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳ ಸಾಧನೆಯ ಸಾಕಾರವಾಗಿ ಮೂಡಿಬಂದಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 560 ಅಂಗನವಾಡಿ ಕೇಂದ್ರಗಳಿವೆ. ಇದನ್ನು ಆಡಳಿತಾತ್ಮಕವಾಗಿ ವಿಟ್ಲ ಮತ್ತು ಬಂಟ್ವಾಳ ಎಂದು ವಿಭಾಗಿಸಿದ್ದು, ಬಂಟ್ವಾಳ ವಿಭಾಗದಲ್ಲಿ 331, ವಿಟ್ಲ ವಿಭಾಗದಲ್ಲಿ 229 ಅಂಗನವಾಡಿಗಳಿವೆ. ಬಂಟ್ವಾಳ ವಿಭಾಗದಲ್ಲಿ ಶಂಭೂರು ಗ್ರಾಮದ ಶಂಭೂರು ಅಂಗನವಾಡಿ ಮತ್ತು ರಾಯಿ ಗ್ರಾಮದ ಗಾಡಿಪಲ್ಕೆ ಅಂಗನವಾಡಿ ಸರಕಾರದ ಅನುದಾನದಲ್ಲಿ ಹವಾನಿಯಂತ್ರಿತ ಸೌಲಭ್ಯ ಹೊಂದಿದೆ. ಇದೀಗ 3ನೆಯದಾಗಿ ನವಜೀವನ ಅಂಗನವಾಡಿ ಜನತೆಯ ಸಹಭಾಗಿತ್ವದಲ್ಲಿ ಹವಾ ನಿಯಂತ್ರಿತ ಸೌಲಭ್ಯ ಹೊಂದಿದೆ.

ನಾಳೆ ಉದ್ಘಾಟನೆ 
ನವಜೀವನ ಅಂಗನವಾಡಿ ಕೇಂದ್ರವನ್ನು ಡಿ. 24ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಲಿದ್ಧಾರೆ. ಶಾಸಕ ರಾಜೇಶ ನಾೖಕ್‌ ಉಳಿಪ್ಪಾಡಿಗುತ್ತು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಗ್ರಾ.ಪಂ. ಅಧ್ಯಕ್ಷ ಯಶೋದರ ಕರ್ಬೆಟ್ಟು ಅಧ್ಯಕ್ಷತೆ ವಹಿಸುವರು ಎಂದು ಅಧ್ಯಕ್ಷ ರವೀಂದ್ರ ಸಪಲ್ಯ ತಿಳಿಸಿದ್ದಾರೆ.

ಹೂಗಿಡಗಳು, ಬಣ್ಣಬಣ್ಣದ ಚಿತ್ತಾರ 
ಸುಸಜ್ಜಿತ ಕಟ್ಟಡದ ಸುತ್ತಲೂ ಆವರಣ ಗೋಡೆ, ಒಳಾಂಗಣದಲ್ಲಿ ಸೆಲ್ಫ್, ವರಾಂಡದಲ್ಲಿ ಸುವಾಸನೆ ಬೀರುವ ಹೂಗಿಡಗಳಿಂದ ಅಲಂಕೃತವಾಗಿದೆ. ಗೋಡೆಗಳಲ್ಲಿ ಬಣ್ಣಬಣ್ಣಗಳ ಚಿತ್ತಾರಗಳನ್ನು ಕಣ್ಮನ ಸೆಳೆಯುವಂತೆ ನಿರ್ಮಿಸುವ ಮೂಲಕ ಹೊಸ ಮಾದರಿಯನ್ನು ಸೃಷ್ಟಿಸಲಾಗಿದೆ. ವಿಸ್ತಾರವಾದ ಒಳಾಂಗಣ, ಹೊರಾಂಗಣ, ಭೋಜನಾಲಯ, ದಾಸ್ತಾನು ಕೊಠಡಿ, ಆಧುನಿಕ ಮಾದರಿ ಅಡುಗೆ ಕೋಣೆ, ಸ್ನಾನಗೃಹ, ಆಂಗ್ಲ ಮಾದರಿ ಮತ್ತು ಸ್ಥಳೀಯ ಮಾದರಿ ಶೌಚಾಲಯ ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಟ್ಟಡವು ಐದು ಸೆಂಟ್ಸ್‌ನಲ್ಲಿ 1,180 ಚ. ಅ. ವಿಸ್ತೀರ್ಣ ಹೊಂದಿದೆ., ಅಂಗಳಕ್ಕೆ ಸಂಪೂರ್ಣ ಇಂಟರ್‌ ಲಾಕ್‌ ಅಳವಡಿಕೆ ಮಾಡಲಾಗಿದೆ. ಗೋಡೆಯಲ್ಲಿ ವಿವಿಧ ಅಲಂಕಾರಿಕ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. 1991ರಲ್ಲಿ ಇಲ್ಲಿನ ನವಜೀವನ ವ್ಯಾಯಾಮ ಶಾಲೆಯಲ್ಲಿ ಅಂಗನವಾಡಿ ಕೇಂದ್ರ ಆರಂಭವಾಗಿತ್ತು, ಹಾಗಾಗಿ ಇದಕ್ಕೆ ನವಜೀವನ ಅಂಗನವಾಡಿ ಕೇಂದ್ರ ಎಂದೇ ಪುನರ್‌ ನಾಮಕರಣ ಮಾಡಲಾಗಿದೆ.

Advertisement

3 ದಶಕಗಳ ಹಿಂದಿನ ಅಂಗನವಾಡಿಯನ್ನು ಸಂಪೂರ್ಣ ಪುನರ್‌ ನಿರ್ಮಿಸಿ ಸರ್ವ ಸೌಲಭ್ಯದೊಂದಿಗೆ ವಿಶೇಷವಾದ ಮಾದರಿಯಲ್ಲಿ ನಿರ್ಮಾಣ ಆಗಿದೆ. ಮೂಲ ಸೌಲಭ್ಯ ಒದಗಿಸಲಾಗಿದೆ.
ರವೀಂದ್ರ ಸಪಲ್ಯ,
  ಅಧ್ಯಕ್ಷರು, ಬಾಲ ವಿಕಾಸ ಸಮಿತಿ

ಮುಂದಿನ ಕ್ರಿಯಾ ಯೋಜನೆಯಲ್ಲಿ ತಾ.ಪಂ. ಅಧ್ಯಕ್ಷ -ಉಪಾಧ್ಯಕ್ಷರ ವತಿಯಿಂದ ಅನುದಾನ ಒದಗಿಸಲು ಆಡಳಿತವು ಚರ್ಚಿಸಿ ತೀರ್ಮಾನಿಸುವುದು.
– ಅಬ್ಟಾಸ್‌ ಅಲಿ
ಉಪಾಧ್ಯಕ್ಷರು, ತಾ.ಪಂ. ಬಂಟ್ವಾಳ 

ಸರ್ವರ ಸಹಕಾರ
2017ರ ಸೆ. 9ರಂದು ಶಿಲಾನ್ಯಾಸ ಮಾಡಲಾಗಿತ್ತು. ಗುತ್ತಿಗೆದಾರ ಶೈಲೇಶ್‌ ಕುಚ್ಚಿಗುಡ್ಡೆ ಗುತ್ತಿಗೆ ನಿರ್ವಹಿಸಿದ್ದರು. 5 ಲಕ್ಷ ರೂ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 3 ಲಕ್ಷ ರೂ., ಸತ್ಯದೇವತಾ ಚಾರಿಟೆಬಲ್‌ ಟ್ರಸ್ಟ್‌ ನಿಂದ 30 ಸಾವಿರ ರೂ. ದೇಣಿಗೆ, ವಿವಿಧ ಜನಪ್ರತಿನಿಧಿಗಳ ಭರವಸೆಯಂತೆ ಉಳಿಕೆ 10. 50 ಲಕ್ಷ ರೂ. ವೆಚ್ಚವನ್ನು ಮಾಡಲಾಗಿದೆ. ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಅವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
– ಯಶೋದರ ಕರ್ಬೆಟ್ಟು
ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.

ವಿಶೇಷ ವರದಿ 

Advertisement

Udayavani is now on Telegram. Click here to join our channel and stay updated with the latest news.

Next