Advertisement

ಚಾರಣ ತಾಣಗಳ ವ್ಯಥೆ; ‘ಯಾಣ’ದಲ್ಲೊಬ್ಬರು ಮಾದರಿ ಅರಣ್ಯಪಾಲಕಿ

08:50 AM Jan 04, 2019 | Sharanya Alva |

ಕರ್ನಾಟಕವು ಹಲವಾರು ಐತಿಹಾಸಿಕ ಮತ್ತು ಪ್ರಾಕೃತಿಕ ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ರಾಜ್ಯದ ಕರಾವಳಿಯು ಪ್ರಾಕೃತಿಕ ಸೌಂದರ್ಯದಿಂದ ಶ್ರೀಮಂತವಾಗಿದ್ದು ಪ್ರತೀ ವರ್ಷ ದೇಶ ವಿದೇಶಗಳ ಹಲವಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಒಂದು ಕಡೆ ಪಶ್ಚಿಮಘಟ್ಟಗಳ ಶ್ರೇಣಿ ಮತ್ತೊಂದು ಕಡೆ ನದಿ ಕಾಡು ಮತ್ತು ಸಮುದ್ರ ಕಿನಾರೆಯಿಂದ ಆವೃತವಾದ ಪ್ರದೇಶ ಕರಾವಳಿಯ ಪ್ರಾಕೃತಿಕ ಸೌಂದರ್ಯದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ನವಂಬರ್ ನಿಂದ ಎಪ್ರಿಲ್ ವರೆಗಿನ ಅವಧಿ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸಮಯವಾಗಿದ್ದು, ಈ ಅವಧಿಯಲ್ಲಿ ಹಲವಾರು ಹಬ್ಬಗಳ ಸೀಸನ್ ಇರುವುದರಿಂದ ಮತ್ತು ಶಾಲಾ ವಿದ್ಯಾರ್ಥಿಗಳ ಪ್ರವಾಸದ ಅವಧಿಯಾಗಿರುವುದರಿಂದ ರಾಜ್ಯದ ಹಲವಾರು ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿರುವುದು ಸಾಮಾನ್ಯವಾಗಿರುತ್ತದೆ.

Advertisement

ಈ ರೀತಿಯಾಗಿ ಪ್ರವಾಸೀ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ನಾವು ಯಾವ ರೀತಿಯಲ್ಲಿ ವ್ಯವಹರಿಸುತ್ತೇವೆ? ಆ ಪರಿಸರದ ಸ್ವಚ್ಛತೆಗೆ ಯಾವ ರೀತಿಯ ಗಮನ ನೀಡುತ್ತೇವೆ ಎಂದು ಯೋಚಿಸಿದಾಗ ನಮಗೆ ನಿರಾಶಾದಾಯಕ ಉತ್ತರವೇ ದೊರೆಯುತ್ತದೆ. ಉತ್ತರ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳವಾದ ‘ಯಾಣ’ ಕೂಡಾ ಇದಕ್ಕೆ ಹೊರತಾಗಿಲ್ಲ. ದಟ್ಟ ಅಡವಿಯ ಮಧ್ಯದಲ್ಲಿ ಪ್ರಾಕೃತಿಕ ವೈಚಿತ್ರ್ಯಕ್ಕೆ ಸಾಕ್ಷಿಯಾಗಿ ಅಗಾಧವಾಗಿ ತಲೆ ಎತ್ತಿ ನಿಂತಿರುವ ಪ್ರಕೃತಿ ನಿರ್ಮಿತ ಶಿಲಾ ಶಿಖರಗಳನ್ನು ನೋಡಲು ವರ್ಷಂಪ್ರತಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.

ಪ್ರಶಾಂತವಾಗಿರುವ ಈ ಪ್ರದೇಶದಲ್ಲಿ ಒಂದಷ್ಟು ಸಮಯವನ್ನು ಕಳೆಯುತ್ತಾರೆ. ಆದರೆ ಬೇಸರದ ವಿಷಯವೆಂದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಾವು ಕಟ್ಟಿಕೊಂಡು ತಂದ ಆಹಾರದ ಪೊಟ್ಟಣಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು, ಆಹಾರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ಯಾಣದ ಸುಂದರ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಕಸದ ತೊಟ್ಟಿಗಳನ್ನಿರಿಸಿದ್ದರೂ ಅದನ್ನು ಗಮನಿಸದೇ ಸಿಕ್ಕ ಸಿಕ್ಕಲ್ಲಿ ತ್ಯಾಜ್ಯಗಳನ್ನು ಎಸೆದು ಪ್ರವಾಸಿ ತಾಣಗಳನ್ನು ಅಂದವನ್ನು ಕೆಡಿಸುತ್ತಿರುವುದು ಖೇದಕರ ವಿಚಾರ.

Advertisement

ಪರಿಸರ ಪ್ರೇಮಿ ಹಾಗೂ ಸಹ್ಯಾದ್ರಿ ಸಂಚಯದ ರೂವಾರಿ ದಿನೇಶ್ ಹೊಳ್ಳ ಅವರು ಇತ್ತೀಚೆಗೆ ಯಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ, ಪ್ರವಾಸಿಗರು ಸಿಕ್ಕಸಿಕ್ಕ ಕಡೆಗಳಲ್ಲಿ ಕಸ ಎಸೆದಿರುವ ಕುರಿತಾದ ವಿಷಯವನ್ನು ಬೇಸರದಿಂದ ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಇನ್ನೊಂದು ಕುತೂಹಲಕರ ಅಂಶವನ್ನೂ ಸಹ ಅವರು ಉಲ್ಲೇಖಿಸಿದ್ದರು. ಅದೇನೆಂದರೆ, ಯಾಣದ ಪರಿಸರದ ಮೇಲುಸ್ತುವಾರಿಗೆ ನೇಮಕಗೊಂಡಿರುವ ಮಹಿಳಾ ಅರಣ್ಯಪಾಲಕಿಯೊಬ್ಬರು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆದಿದ್ದ ಕಸಗಳನ್ನು ಸ್ವಯಂಪ್ರೇರಣೆಯಿಂದ ಸ್ವಚ್ಛಗೊಳಿಸುತ್ತಿದ್ದರು. ಪರಿಸರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ಉಳಿದೆಲ್ಲಾ ತ್ಯಾಜ್ಯಗಳನ್ನು ಗುಡಿಸಿ ಬಳಿಕ ಅವುಗಳನ್ನು ಕಸದ ತೊಟ್ಟಿಗೆ ಹಾಕುವ ಕೆಲಸವನ್ನು ಮಾಡುತ್ತಿದ್ದರು. ಈ ರೀತಿಯಾಗಿ ತನ್ನ ಕೆಲಸವಲ್ಲದಿದ್ದರೂ ತಾನು ಕರ್ತವ್ಯ ನಿರ್ವಹಿಸುತ್ತಿರುವ ಜಾಗದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿರುವ ಇವರ ಬದ್ಧತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಕುಟುಂಬ ಸದಸ್ಯರೊಂದಿಗೋ, ಸ್ನೇಹಿತರೊಂದಿಗೋ ಭೇಟಿ ನೀಡುವ ನಮಗೆಲ್ಲಾ ಮಾದರಿಯಾಗಬೇಕಿದೆ.

ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಒಂದಷ್ಟು ಮಧುರ ಕ್ಷಣಗಳನ್ನು ಕಳೆದು ಬಳಿಕ ನಾವೇನೋ ಅಲ್ಲಿಂದ ಹೊರಡುತ್ತೇವೆ. ಆದರೆ ನಾವಲ್ಲಿ ಎಸೆದು ಬಂದಿರುವ ತ್ಯಾಜ್ಯಗಳು ಆ ಪರಿಸರದಲ್ಲಿ ವಾಸಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ಅದೆಷ್ಟು ಮಾರಕ ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಇದು ಯಾಣದ ಕಥೆ ಮಾತ್ರವಲ್ಲ, ಸರಿ ಸುಮಾರು ಹೆಚ್ಚಿನ ಎಲ್ಲಾ ಪ್ರವಾಸಿ ತಾಣಗಳು, ಕಡಲ ಕಿನಾರೆಗಳು, ಪಶ್ಚಿಮ ಘಟ್ಟ ಭಾಗದಲ್ಲಿರುವ ಚಾರಣ ತಾಣಗಳ ಸಾಮಾನ್ಯ ವ್ಯಥೆಯಾಗಿದೆ. ಆದರೆ ಎಲ್ಲಾ ಕಡೆಗಳಲ್ಲಿ ಯಾಣದಲ್ಲಿರುವ ಅರಣ್ಯಪಾಲಕಿಯಂತಹ ಪರಿಸರ ಪ್ರೇಮಿ ಅಧಿಕಾರಿ ಇರುವುದಿಲ್ಲ! ಹಾಗಾಗಿ ಪರಿಸರ ರಕ್ಷಿಸುವ ಸ್ವಯಂಸೇವಕರು ನಾವಾಗಬೇಕಿದೆ.

ಪ್ರವಾಸದ ಸಂದರ್ಭದಲ್ಲಿ ಈ ಕೆಳಗಿನ ನಿಯಮಗಳನ್ನು ಅಳವಡಿಸಿಕೊಳ್ಳೋಣ:

1. ಪ್ರವಾಸದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಆದಷ್ಟು ಕಡಿಮೆ ಇರಲಿ. ಪ್ಲಾಸ್ಟಿಕ್ ವಸ್ತುಗಳಿದ್ದರೂ ಅವುಗಳನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ಎಸೆಯದೇ ನಮ್ಮ ಜೊತೆಗೇ ವಾಪಸು ತಂದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡೋಣ.

2. ನಾವು ಭೇಟಿ ನೀಡುವ ಸ್ಥಳಗಳಲ್ಲಿ ಆಹಾರ ಸೇವಿಸಿದ ಬಳಿಕ ಉಳಿಕೆ ಆಹಾರವನ್ನು ಮತ್ತು ಇತರೇ ತ್ಯಾಜ್ಯಗಳನ್ನು ತ್ಯಾಜ್ಯ ವಿಲೇವಾರಿಗೆ ಇರಿಸಿರುವ ತೊಟ್ಟಿಗಳಲ್ಲೇ ಹಾಕಿ.

3. ಪ್ರವಾಸಿ ತಾಣಗಳು ನಮ್ಮ ಮನಸ್ಸುಗಳನ್ನು ಆಹ್ಲಾದಗೊಳಿಸಲು ಇವೆಯೇ ಹೊರತು ನಮ್ಮ ವಿಕೃತಿಗಳನ್ನು ಮೆರೆಯಲು ಅಲ್ಲ ಎಂಬುದನ್ನು ಮರೆಯದಿರೋಣ!

4. ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡುಹೋಗುವ ಸಂದರ್ಭದಲ್ಲಿ ಬಸ್ಸುಗಳಲ್ಲಿ ಕಸದ ಬುಟ್ಟಿಗಳನ್ನು ಮತ್ತು ತ್ಯಾಜ್ಯ ತುಂಬುವ ದೊಡ್ಡ ಕವರ್ ಗಳನ್ನು ಇರಿಸಿಕೊಳ್ಳುವುದು ಉತ್ತಮ.

5. ಪ್ರಕೃತಿಗೆ ತನ್ನೊಡಲಲ್ಲಿ ವಾಸಿಸುತ್ತಿರುವ ಪ್ರಾಣಿ ಪಕ್ಷಿಗಳ ಧ್ವನಿ ಸಹನೀಯವೇ ಹೊರತು ನಮ್ಮ ಬೊಬ್ಬೆ ಅಬ್ಬರಗಳಲ್ಲ ಎಂಬುದು ನೆನಪಿಡೋಣ. ಶಬ್ದಮಾಲಿನ್ಯ ಪ್ರವಾಸಿ ತಾಣಗಳಲ್ಲಿ ನಿಷೇಧ.

ಇವೆಲ್ಲಾ ಪ್ರವಾಸಿ ತಾಣಗಳಲ್ಲಿ ನಾವು ಅನುಸರಿಸಬಹುದಾಗಿರುವ ಸಾಮಾನ್ಯ ಸರಳ ಸೂತ್ರಗಳು. ಇವನ್ನು ಹೊರತುಪಡಿಸಿ, ಸ್ವಯಂ ನಿಯಂತ್ರಣವೊಂದೇ ಸ್ವಚ್ಛ, ಸುಂದರ ಪರಿಸರ ಕಾಳಜಿಗೆ ಪೂರಕ. ಈ ವಿಷಯಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಿಬರಬೇಕೇ ಹೊರತು, ಬ್ಯಾನರ್ ಬೋರ್ಡ್ ಗಳಲ್ಲಿ ಅಲ್ಲ!. ಪ್ರವಾಸದಿಂದ ನಮ್ಮ ಮನ ಮನಸ್ಸುಗಳು ಮುದಗೊಳ್ಳುವ ಜೊತೆಗೇ ಪ್ರಕೃತಿಯ ಸೌಂದರ್ಯ ಕೆಡದಿರುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.

*ಹರಿಪ್ರಸಾದ್

ಪೂರಕ ಮಾಹಿತಿ : ದಿನೇಶ್ ಹೊಳ್ಳ, ಸಹ್ಯಾದ್ರಿ ಸಂಚಯ

Advertisement

Udayavani is now on Telegram. Click here to join our channel and stay updated with the latest news.

Next