Advertisement

ಚಿಣ್ಣರ ಬಿಂಬದ ಕಾರ್ಯ ರಾಷ್ಟ್ರಕ್ಕೆ ಮಾದರಿ: ಡಿಕೆಶಿ

06:24 AM Feb 05, 2019 | |

ಮುಂಬಯಿ: ಹುಟ್ಟು – ಸಾವಿನ ನಡುವೆ ನಾವೇನು ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯ. ಇಲ್ಲಿನ ಕನ್ನಡಿಗರು ಜತೆಗೂಡಿ ಚಿಣ್ಣರ ಬಿಂಬ ಸಂಸ್ಥೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿ ದೇಶದ ಭವಿಷ್ಯ ಉತ್ತಮವಾಗಿ ಸಾಗಲು ಜಾತಿ ಭೇದ ಮರೆತು ದುಡಿಯುತ್ತಿದ್ದಾರೆ. ಹೊರನಾಡಿನಲ್ಲಿ ಕನ್ನಡದ ಸಂಸ್ಕೃತಿ-ಭಾಷೆ ಉಳಿಸುವ ಚಿಣ್ಣರ ಬಿಂಬದ ಕಾರ್ಯ ರಾಷ್ಟ್ರಕ್ಕೆ ಮಾದರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಅವರು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ರವಿವಾರ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರ ಪ್ರಾಯೋಜಕತ್ವದಲ್ಲಿ ಜರುಗಿದ ಚಿಣ್ಣರ ಬಿಂಬದ 16ನೇ ಮಕ್ಕಳ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅವಿಭಜಿತ ದ.ಕ. ಜಿಲ್ಲೆಯ ಜನರು ಸಾಹಿತ್ಯ-ಸಂಸ್ಕೃತಿ-ಉದ್ಯಮ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಇತರರಿಗೆ ಮಾದರಿ ಎನಿಸಿದವರು ಎಂದು ಬಣ್ಣಿಸಿದ ಶಿವಕುಮಾರ್‌, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಶ್ರಮಿಸುತ್ತಿರುವ ಚಿಣ್ಣರ ಬಿಂಬ ಸಂಸ್ಥೆಗೆ ಕರ್ನಾಟಕ ಸರಕಾರದ ವತಿಯಿಂದ ಆರ್ಥಿಕ ನೆರವು ನೀಡಲು ಯೋಜನೆ ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವೆ ಎಂದರು.

ಗೌರವ ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಖ್‌ ಮಾತನಾಡಿ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತ ಉತ್ತಮ ವ್ಯಕ್ತಿಗಳಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಚಿಣ್ಣರ ಬಿಂಬದ ಕಾರ್ಯ ಮಾದರಿಯಾಗಿದೆ ಎಂದರು.

ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಚಿಣ್ಣರ ಬಿಂಬದ ಮಕ್ಕಳ ಉತ್ಸವ ನಡೆದುಬಂದ ದಾರಿಯನ್ನು ನೆನಪಿಸಿ, 27 ಶಿಬಿರಗಳಲ್ಲಿ 4 ಸಾವಿರಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆದಿದ್ದು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ ಎಂದರು.

Advertisement

ವಿಜಯಾ ಕುಮಾರ್‌ ಶೆಟ್ಟಿ, ಸುರೇಂದ್ರ ಕುಮಾರ್‌ ಹೆಗ್ಡೆ, ರಮೇಶ್‌ ರೈ, ತಾಳಿಪಾಡಿ ಭಾಸ್ಕರ ಶೆಟ್ಟಿ, ಎಸ್‌.ಜಿ. ಸಿದ್ಧರಾಮಯ್ಯ, ನಯನಾ ಭಂಡಾರಿ, ರೇಣುಕಾ ಭಂಡಾರಿ ಉಪಸ್ಥಿತರಿದ್ದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಮತ್ತು ಚಿಣ್ಣರ ಬಿಂಬದ ವಿದ್ಯಾರ್ಥಿ ಅಪೇಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

‘ಕನ್ನಡಾಂಬೆಯ ನಿಜಾರ್ಥದ ಸೇವೆ’: ಅವಿಭಜಿತ ದ.ಕ. ಜಿಲ್ಲೆಯಿಂದ ಹೊರನಾಡಿಗೆ ಹೋದವರು ಅಲ್ಲೆಲ್ಲ ನಮ್ಮ ನೆಲದ ಸಂಸ್ಕೃತಿಯನ್ನು ಜೀವಂತವಾಗಿರಿಸಲು ತುಂಬಾ ಶ್ರಮಪಡುತ್ತಿದ್ದಾರೆ. ಮರಾಠಿ ಮಣ್ಣಿನಲ್ಲಿ ಚಿಣ್ಣರ ಬಿಂಬದ ಈ ಕಾರ್ಯಕ್ರಮ ನಿಜಕ್ಕೂ ಕನ್ನಡಾಂಬೆಯ ನಿಜಾರ್ಥದ ಸೇವೆ ಎಂದು ವಿಜಯವಾಣಿ ಸಂಪಾದಕ ಕೆ.ಎನ್‌. ಚನ್ನೇಗೌಡ ಹೇಳಿದರು.

ಅವರು ಚಿಣ್ಣರ ಬಿಂಬದ 16ನೇ ಮಕ್ಕಳ ಸಾಂಸ್ಕೃತಿಕ ಉತ್ಸವ ಮತ್ತು ಪ್ರತಿಭಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ರೀಜೆನ್ಸಿ ಹೊಟೇಲ್‌ ಸಮೂಹದ ಆಡಳಿತ ನಿರ್ದೇಶಕ ಜಯರಾಮ ಎನ್‌. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾ ತುಲಸೀ ಪೀಠಾಧೀಶ್ವರ್‌ ಸ್ವಾಮಿ ಪುರುಷೋತ್ತಮ ರಾಮಾನುಜಾಚಾರ್ಯ ತುಲಸೀ ಮಹಾರಾಜ್‌ ಆಶೀರ್ವಚನ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ಧರಾಮಯ್ಯ, ಬಂಟ್ಸ್‌ ಸಂಘ ಮುಂಬಯಿ ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಮನೋರಮಾ ಎನ್‌.ಬಿ. ಶೆಟ್ಟಿ, ಯುವ ಉದ್ಯಮಿ ಅಶೋಕ್‌ ಶೆಟ್ಟಿ ಪೆರ್ಮುದೆ, ಕಲಾ ಜಗತ್ತು ಸ್ಥಾಪಕ ತೋನ್ಸೆ ವಿಜಯಕುಮಾರ್‌ ಶೆಟ್ಟಿ, ಚಿಣ್ಣರ ಬಿಂಬದ ರೂವಾರಿ ಮತ್ತು ಪ್ರವರ್ತಕರಾದ ಪ್ರಕಾಶ್‌ ಬಿ. ಭಂಡಾರಿ, ರೇಣುಕಾ ಪಿ. ಭಂಡಾರಿ, ಚಿಣ್ಣರ ಬಿಂಬದ ಕಾರ್ಯಾಧ್ಯಕ್ಷೆ ನೈನಾ ಪಿ. ಭಂಡಾರಿ ವೇದಿಕೆಯಲ್ಲಿದ್ದರು.

ಚಿಣ್ಣರ ಬಿಂಬದ ಮಾರ್ಗದರ್ಶಕ ಡಾ. ಸುರೇಂದ್ರ ಕುಮಾರ್‌ ಹೆಗ್ಡೆ ಸ್ವಾಗತಿಸಿದರು. ನೈಶಾ ಶೆಟ್ಟಿ, ಹಾರ್ದಿಕ್‌ ಶೆಟ್ಟಿ, ದೃಶ್ಯಾ ಹೆಗ್ಡೆ, ವಿಶ್ವ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರಖ್ಯಾತ್‌ ಶೆಟ್ಟಿ, ಜಾನ್ಹವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪೂರ್ಣಿಮಾ ಎಸ್‌. ಶೆಟ್ಟಿ ಸ್ಪರ್ಧೆಗಳನ್ನು ನಿರ್ವಹಿಸಿ ವಂದಿಸಿದರು. ಮಕ್ಕಳ ಪ್ರತಿಭಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಮಕ್ಕಳ ಹಬ್ಬವಾಗಲಿ: ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ಮಣಿಪಾಲ ಆವೃತ್ತಿ ಸಂಪಾದಕ ಅರವಿಂದ ನಾವಡ ಮಾತನಾಡಿ, ಸಂಸ್ಕೃತಿಗೆ ಭಾಷೆ ಹೆಬ್ಟಾಗಿಲು. ಸಂಸ್ಕೃತಿಯನ್ನು ಉಳಿಸಬೇಕಾದರೆ ಭಾಷೆ ಉಳಿಯಲೇಬೇಕು. ಹೊರನಾಡಿ ನಲ್ಲಿದ್ದುಕೊಂಡು ಈ ಕಾರ್ಯ ಮಾಡುತ್ತಿರುವ ಚಿಣ್ಣರ ಬಿಂಬಕ್ಕೆ ಕರ್ನಾಟಕದ ಜನರ ಪರವಾಗಿ ಅಭಿನಂದನೆ ಹೇಳುತ್ತೇನೆ ಎಂದರು. ಕನ್ನಡ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವಂತಹ ಇಂತಹ ನೈಜ ಸಂಸ್ಥೆಗಳಿಗೆ ಕರ್ನಾಟಕ ಸರಕಾರವೂ ಸಹಕಾರ ನೀಡಬೇಕು ಎಂದರು.

ಚಿಣ್ಣರ ಬಿಂಬ ಎಂಬ ಈ ಒಂದು ಕಾರ್ಯಕ್ರಮದಲ್ಲಿ ಬಹುಶಃ ಜಾತಿ, ಧರ್ಮ ಅನ್ನೋದು ಏನೂ ಇಲ್ಲ. ಇಲ್ಲಿರೋ ಮಕ್ಕಳಲ್ಲಿ ಯಾರನ್ನೂ ಅವರ ಜಾತಿಗಳಿಂದ ಗುರುತಿಸಲಾಗಿಲ್ಲ. ಬದಲಿಗೆ ಅವರನ್ನು ಅವರಲ್ಲಿರೋ ಪ್ರತಿಭೆಯಿಂದ ಗುರುತಿಸಲಾಗಿದೆ. 
-ಡಿ.ಕೆ. ಶಿವಕುಮಾರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next