ಹುಬ್ಬಳ್ಳಿ: ಅದೊಂದು ಪುಟ್ಟ ಎಗ್ ರೈಸ್ ಸೆಂಟರ್. ಒಳ ಹೋದರೆ ಜ್ಞಾನಪೀಠ ಪುರಸ್ಕೃತರು, ಚಿಂತಕರು, ದಾರ್ಶನಿಕರು, ಚಿತ್ರರಂಗದ ದಿಗ್ಗಜರು ಹೀಗೆ ವಿವಿಧ ಸಾಧಕರ ಭಾವಚಿತ್ರ, ಪ್ರೇರಣಾದಾಯಕ ನುಡಿಗಳು ಕಾಣಸಿಗುತ್ತವೆ. ದೇಶ-ನಾಡು ಪ್ರೇಮ, ನಮ್ಮ ಪರಂಪರೆ-ಸಂಸ್ಕೃತಿ ಪ್ರತೀಕದ ಹಲವು ಚಿತ್ರಣಗಳು ಆಕರ್ಷಿಸುತ್ತವೆ.
ನೆಹರು ಮೈದಾನ ಬಳಿಯ ಎಗ್ ರೈಸ್ ಸೆಂಟರ್‌ನ ಮಾಲೀಕ ವಿಜಯಪುರ ಇಂಡಿ ತಾಲೂಕಿನ ತಡವಲಗ ಗ್ರಾಮದ ಯಶವಂತ ಡೋಣೂರು ಅಂಗಡಿ ಚಿಕ್ಕದಾದರೂ ಸಾರುವ ಸಂದೇಶ ದೊಡ್ಡದು ಹಾಗೂ ಮಹತ್ವದ್ದು ಎಂಬುದನ್ನು ಸಾರಿದ್ದಾರೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 18 ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದು ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಶ್ರೀ ಕೃಷ್ಣ ಭವನದಲ್ಲಿ ವೇಟರ್ ಆಗಿ ಕೆಲಸ ಆರಂಭಿಸಿದ್ದರು. ಒಂದು ವರ್ಷದ ಬಳಿಕ 2003ರಲ್ಲಿ ಫುಟ್‌ಪಾತ್‌ನಲ್ಲಿ ಎಗ್ ರೈಸ್ ಅಂಗಡಿ ಆರಂಭಿಸಿದ್ದರು. ಕಳೆದ 3 ವರ್ಷಗಳಿಂದ ಎಗ್‌ರೈಸ್ ಸೆಂಟರ್ ಬಳಿಯೇ ಸಣ್ಣ ಅಂಗಡಿ ಲೀಜ್ ಗೆ ಪಡೆದಿದ್ದಾರೆ. ವಿದ್ಯಾನಗರದಲ್ಲಿನ ಪಂಜುರ್ಲಿ ಹೋಟೆಲ್‌ಗೆ ಕುಟುಂಬ ಸಮೇತ ಹೋಗಿದ್ದಾಗ ಅಲ್ಲಿ ಹಾಕಲಾಗಿದ್ದ ಮಹನೀಯರ ಭಾವಚಿತ್ರ, ಪ್ರೇರಣಾದಾಯಕ ನುಡಿಗಳನ್ನು ನೋಡಿ ಪ್ರಭಾವಿತರಾಗಿ ಅದೇ ಮಾದರಿಯನ್ನು ತಮ್ಮ ಅಂಗಡಿಯಲ್ಲಿ ಅಳವಡಿಸಿದ್ದಾರೆ.
ಕೋವಿಡ್ ವೈರಸ್ ಹಾವಳಿ: ಕೋವಿಡ್ ವೈರಸ್ ಲಾಕ್‌ಡೌನ್ ಮುನ್ನ ಪ್ರತಿದಿನ 1ರಿಂದ 1.5 ಕ್ವಿಂಟಲ್ ಎಗ್‌ರೈಸ್ ಮಾರಾಟ ಮಾಡುತ್ತಿದ್ದೆವು. ಆದರೆ ಇದೀಗ ವೈರಸ್ ಹಾವಳಿಯಿಂದ ಗ್ರಾಹಕರ ಕೊರತೆಯಿಂದ ಇಳಿಕೆ ಕಂಡಿದೆ. ಆದರೂ ಗ್ರಾಹಕರು ಆಗಮಿಸುತ್ತಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಯಶವಂತ.
ಎಗ್‌ರೈಸ್ ತಿನ್ನಲು ಬರುವ ಗ್ರಾಹಕರಿಗೆ ಉತ್ತಮ ಗುಣಮಟ್ಟದ ರೈಸ್ ನೀಡಬೇಕು, ಜೊತೆಗೆ ಅವರಿಗೆ ಪ್ರೋತ್ಸಾಹದಾಯವಾಗುವಂತೆ ಖ್ಯಾತನಾಮರ ಭಾವಚಿತ್ರ ಹಾಕುವ ಮೂಲಕ ಇರುವಷ್ಟು ದಿನ ಖುಷಿ-ಖುಷಿಯಾಗಿರಬೇಕು ಎಂದು ಎಲ್ಲ ವ್ಯವಸ್ಥೆ ಮಾಡಲಾಗಿದೆ.
-ಯಶವಂತ ಡೋಣೂರು, ಎಗ್‌ರೈಸ್ ಸೆಂಟರ್ ಮಾಲೀಕ
ಜ್ಞಾನಪೀಠ ಪ್ರಶಸ್ತಿ ಪಡೆದವರಿಂದ ಹಿಡಿದು ದೇಶದ ಖ್ಯಾತನಾಮರ ಭಾವಚಿತ್ರ ಹಾಕಿದ್ದು, ಇಲ್ಲಿಗೆ ಆಗಮಿಸಿದರೆ ಹೊಸ ಚೈತನ್ಯ ಬಂದ ಅನುಭವವಾಗುತ್ತದೆ. ಅವಳಿನಗರದಲ್ಲಷ್ಟೇ ಅಲ್ಲ, ಇಂತಹ ಎಗ್‌ರೈಸ್ ಸೆಂಟರ್ ಮತ್ತೆಲ್ಲೂ ಕಾಣಸಿಗದು. ಅಷ್ಟು ಅಚ್ಚುಕಟ್ಟಾಗಿದೆ.
-ಯಲ್ಲಪ್ಪ ಸುಣಗಾರ, ಗ್ರಾಹಕ
-ಬಸವರಾಜ ಹೂಗಾರ