ಮುಂಬಯಿ: ಮಹಾರಾಷ್ಟ್ರ ಸ್ಟೇಟ್ ಕೋ ಆಪರೇಟಿವ್ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಇದರ 2015-2016 ನೇ ಆರ್ಥಿಕ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದ್ದು, 500 ಕೋ. ರೂ. ಗಳ ಮೇಲಿನ ಠೇವಣಿ ಸಂಗ್ರಹಣಾ ಸೇವೆಗಾಗಿ ಮುಂಬಯಿ ವಿಭಾಗದಲ್ಲೇ ಪ್ರಪ್ರಥಮ ಸ್ಥಾನದೊಂದಿಗೆ “ಉತ್ಕೃಷ್ಟ ಬ್ಯಾಂಕ್’ ಪುರಸ್ಕಾರವನ್ನು ಮೋಡೆಲ್ ಬ್ಯಾಂಕಿಗೆ ಪ್ರದಾನಿಸಿ ಗೌರವಿಸಿದೆ.
ಅಸೋಸಿಯೇಶನ್ 21ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಫೆ. 10ರಂದು ಪೂರ್ವಾಹ್ನ ದಾದರ್ ಪಶ್ಚಿಮದ ಪ್ರಭಾದೇವಿಯ ರವೀಂದ್ರ ನಾಟ್ಯಮಂದಿರದ ಸಭಾಗೃಹದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಸಹಕಾರಿ ದಿಗ್ಗಜ ಪ್ರಥ್ವೀರಾಜ್ ಚವಾಣ್ ಅಧ್ಯಕ್ಷತೆಯಲ್ಲಿ ಜರಗಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಲೋಕ್‌ಮತ್ ದೈನಿಕದ ಸಂಪಾದಕ ಗಿರೀಶ್ ಕುಬೇರ್, ಬ್ಯಾಂಕ್ಸ್ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ಸುಭಾಶ್ ರಾಮ್‌ದೇವ್ ಜೋಶಿ ಅವರು ಮೋಡೆಲ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ Â.ಡಿ’ಸೋಜಾ ಅವರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಸೋಸಿಯೇಶನ್‌ನ ಉಪ ಕಾರ್ಯಾಧ್ಯಕ್ಷ ಪ್ರಚೀತ್ ಎ. ಪೊರೆಡ್ಡಿವರ್, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಸ್ವಾತಿ ಪಾಂಡೆ, ಮೋಡೆಲ್ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರ, ಬ್ಯಾಂಕ್‌ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ’ಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ಸ್ ಅಸೋಸಿಯೇಶನ್‌ನ ಸಂಚಾಲಕರುಗಳಾದ ಡಾ| ಶಶಿ ಬಿ. ಅಹಿರೆ, ಡಾ| ವಿನಾಯಕ್ ಯಶವಂತ್ ತರಾಳೆ, ಮಧುಕರ್‌ರಾವ್ ವಿ. ಜವಂಜಾಳ್, ವಿಕಾಸ್ ಬಾಲಚಂದ್ರ ಸಾವಂತ್, ವಿಶ್ವಾಸ್ ಠಾಕೂರ್ ವಸಂತ್ ವಿ. ಗುುಖೇಡ್ಕರ್, ಭರತ್ ಮಾಲಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮುದಾಯದ ಮುಂದಾಳುಗಳಿಂದ ದಿ. ಮೆಂಗ್ಳೂರಿಯ ಕಥೋಲಿಕ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದು ಸ್ಥಾಪಿಸಲ್ಪಟ್ಟು ಪ್ರಸ್ತುತ ಮೋಡೆಲ್ ಬ್ಯಾಂಕ್ ಕೋ. ಆಪರೇಟಿವ್ ಲಿಮಿಟೆಡ್ ಆಗಿ ಹೆಸರುವಾಸಿಯಾಗಿರುವ ಈ ಬ್ಯಾಂಕ್ ಕಳೆದ ವರ್ಷವಷ್ಟೇ ಶತಮಾನೋತ್ಸವವನ್ನು ಆಚರಿಸಿತ್ತು. ಬ್ಯಾಂಕ್ ಮುಂಬಯಿ, ಥಾಣೆ, ನವಿಮುಂಬಯಿ ಉಪ ನಗರವನ್ನೊಳಗೊಂಡು ಒಟ್ಟು 21 ಶಾಖೆಗಳ ಮೂಲಕ ಸೇವಾ ನಿರತವಾಗಿದೆ. 2015-2016ರ ಹಣಕಾಸು ಸಾಲಿನಲ್ಲಿ ಒಟ್ಟು 500 ಕೋ. ರೂ. ಗಳಿಗೂ ಅಧಿಕ ವ್ಯವಹಾರ ನಡೆಸಿ ಗ್ರಾಹಕರು ಮತ್ತು ಷೇರುದಾರರ ವಿಶ್ವಾಸಕ್ಕೆ ಪಾತ್ರವಾಗಿದೆ.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್