ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಜ್ಯೋತಿನಗರ ನಿವಾಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಿಸ್ರಿಯಾ (17) ಜ್ವರದಿಂದ ರವಿವಾರ ಮೃತಪಟ್ಟಿದ್ದಾರೆ.
ಬಿಳಿ ರಕ್ತ ಕಣಗಳ ಕುಸಿತ ದಿಂದ ಸಾವು ಸಂಭವಿಸಿದ್ದು, ಇದು ಡೆಂಗ್ಯೂ ಪ್ರಕರಣ ಎಂದು ಶಂಕಿಸಲಾಗಿದೆ. ಸ್ಥಳೀಯವಾಗಿ ಡೆಂಗ್ಯೂ ಬಗ್ಗೆ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಜ್ಯೋತಿನಗರದ ಮಯ್ಯದ್ದಿ -ರಮ್ಲಾತ್ ದಂಪತಿಯ ದ್ವಿತೀಯ ಪುತ್ರಿ ಮಿಸ್ರಿಯಾ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು. ಕೆಲವು ದಿನಗಳಿಂದ ಆಕೆ ವಿಪರೀತ ಜ್ವರದಿಂದ ಬಳಲುತ್ತಿದ್ದು, ಬಿಳಿ ರಕ್ತ ಕಣಗಳ ಕುಸಿತ ಸಮಸ್ಯೆ ಉಲ್ಬಣಿಸಿ ರವಿವಾರ ರಾತ್ರಿ ನಿಧನ ಹೊಂದಿರುವುದಾಗಿ ತಿಳಿದು ಬಂದಿದೆ.
ಮಯ್ಯದ್ದಿ ಅವರು ದುಬಾೖಯಲ್ಲಿ ಇದ್ದು, ಮಗಳ ಅನಾರೋಗ್ಯ ವಿಷಯ ತಿಳಿದು ಊರಿಗೆ ಬಂದಿರು ವುದಾಗಿ ತಿಳಿದುಬಂದಿದೆ.
ಸರಕಾರಿ ಆಸ್ಪತ್ತೆಗಳಲ್ಲಿ ಡೆಂಗ್ಯೂ ಸಹಿತ ಮಲೇರಿಯಾ ಪ್ರಕರಣಗಳು ದಾಖಲಾಗಿದ್ದಲ್ಲಿ ಕೂಡಲೇ ಮಾಹಿತಿ ಲಭಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಮಲೇರಿಯಾ ಕೇಂದ್ರಕ್ಕೆ ವರದಿ ಬಂದ ಬಳಿಕವಷ್ಟೇ ನಮಗೆ ಮಾಹಿತಿ ಸಿಗಲು ಸಾಧ್ಯ ಮತ್ತು ಆ ಕುರಿತು ಸೂಕ್ತ ಸಮೀಕ್ಷೆ, ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಮಿಸ್ರಿಯಾ ಪ್ರಕರಣ ಇನ್ನಷ್ಟೇ ಮಲೇರಿಯಾ ಕೇಂದ್ರಕ್ಕೆ ವರದಿಯಾಗಬೇಕಿದೆ. ಡೆಂಗ್ಯೂನಿಂದ ಈ ಸಾಲಿನಲ್ಲಿ ಇದುವರೆಗೆ ಮೂಡು ಬಿದಿರೆ ತಾಲೂಕಿನಲ್ಲಿ ಸಾವಿನ ಪ್ರಕರಣ ದಾಖಲಾಗಿಲ್ಲ. ಇದು ಡೆಂಗ್ಯೂ ನಿಂದಾದ ಸಾವು ಎಂದು ದೃಢಪಟ್ಟಲ್ಲಿ ಮೂಡುಬಿದಿರೆ ತಾಲೂಕಿನಲ್ಲಿ ಇದೇ ಈ ಸಾಲಿನ ಮೊದಲ ಪ್ರಕರಣ. ಈ ಬಗ್ಗೆ ತತ್‌ಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ತಾ| ಆರೋಗ್ಯಾಧಿಕಾರಿ ಡಾ| ಸುಜಯ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.