Advertisement

ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಎಚ್ಎಂ ಅಮಾನತಿಗೆ ಆಗ್ರಹ

05:23 PM Apr 28, 2019 | Team Udayavani |

ಮುದ್ದೇಬಿಹಾಳ: ಎಸ್‌ಡಿಎಂಸಿ ಮತ್ತು ಗ್ರಾಮಸ್ಥರ ಜೊತೆ ಅಸಹಕಾರದಿಂದ ನಡೆದುಕೊಳ್ಳುತ್ತಿರುವ ಹಾಗೂ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರೊಬ್ಬರ ಸಂಬಳ ಬಿಡುಗಡೆಗೆ ವಿನಾಕಾರಣ ತೊಂದರೆ ಕೊಡುತ್ತಿರುವ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಪಿ.ಕೆ. ರಾಠೊಡ ಇವರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಮತ್ತು ಅತಿಥಿ ಶಿಕ್ಷಕ ಎಸ್‌.ಸಿ. ಬೀಳಗಿ ಅವರಿಗೆ ಸೇವೆ ಸಲ್ಲಿಸಿದ ಅವಧಿಯ ಸಂಬಳ ಬಿಡುಗಡೆಗೊಳಿಸಿ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ಆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಇಲ್ಲಿನ ತಹಶೀಲ್ದಾರ್‌ ಹಾಗೂ ಕ್ಷೇತ್ರ ಶಿಕ್ಷಣಾಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಅತಿಥಿ ಶಿಕ್ಷಕ ಬೀಳಗಿ ಅವರು ಜುಲೈ 2018ರಿಂದ ಮಾರ್ಚ್‌ 2019ರವರೆಗೆ ಅತಿಥಿ ಶಿಕ್ಷಕರಾಗಿ ಇದೇ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದರೂ, ಶಾಲೆ ವಾರ್ಷಿಕ ದಾಖಲಾತಿಗಳನ್ನು ನಿಯಮಾನುಸಾರ ಸಲ್ಲಿಸಿದ್ದರೂ ಮುಖ್ಯಾಧ್ಯಾಪಕ ರಾಠೊಡ ಇದುವರೆಗೂ ಸಂಬಳ ಬಿಡುಗಡೆ ಮಾಡಿಲ್ಲ. ಈ ಅತಿಥಿ ಶಿಕ್ಷಕರ ವೇತನಾನುದಾನ 22-2-2019ರಂದೇ ಮುಖ್ಯಾಧ್ಯಾಪಕರ ಖಾತೆಗೆ ಜಮಾ ಆಗಿದ್ದರೂ ಸಂಬಳ ಬಿಡುಗಡೆ ಮಾಡದಿರುವ ನಡವಳಿಕೆ ಗಮನಿಸಿದರೆ ತನ್ನ ಸಂಬಳ ಬಿಡುಗಡೆಗಾಗಿ ಮುಖ್ಯಾಧ್ಯಾಪಕರು ಹಣ ಕೇಳುತ್ತಿದ್ದಾರೆ ಎಂದು ಆ ಅತಿಥಿ ಶಿಕ್ಷಕರು ಆರೋಪಿಸಿದ್ದು ನಿಜ ಅನ್ನಿಸತೊಡಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮುಖ್ಯಾಧ್ಯಾಪಕ ರಾಠೊಡ ಶಾಲೆಗೆ ಬರುವ ಯಾವುದೇ ಅನುದಾನ ಮಾಹಿತಿ ಎಸ್‌ಡಿಎಂಸಿ ಅಧ್ಯಕ್ಷರಿಗೆ, ಸದಸ್ಯರಿಗೆ ತಿಳಿಸುವುದಿಲ್ಲ. ಈ ಬಗ್ಗೆ ಕೇಳಿದರೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರೊಂದಿಗೆ, ಗ್ರಾಮಸ್ಥರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ. ಶಾಲೆಯ ಯಾವುದೇ ಕೆಲಸದಲ್ಲಿ ಎಸ್‌ಡಿಎಂಸಿ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ಅತಿಥಿ ಶಿಕ್ಷಕರ ಸಂಬಳ ಬಿಡುಗಡೆ ಮಾಡುವಂತೆ ಹಲವು ಬಾರಿ ಹೇಳಿದರೂ, ಈ ಬಗ್ಗೆ ಆ ಅತಿಥಿ ಶಿಕ್ಷಕರಿಗೆ ಆಗಿರುವ ಅನ್ಯಾಯದ ಸುದ್ದಿ ಮಾಧ್ಯಮಗಳಲ್ಲಿ ಬಂದಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ. ಆ ಅತಿಥಿ ಶಿಕ್ಷಕರು 18-3-2019, 23-3-2019ರಂದು ಎರಡು ಬಾರಿ ಸಂಬಳ ಕೊಡುವಂತೆ ಕೋರಿ ಮನವಿ ಕೊಡಲು ಹೋದರೆ ಸ್ವೀಕರಿಸದೆ ಮುಖ್ಯಾಧ್ಯಾಪಕ ರಾಠೊಡ ಉದ್ಧಟತನ ತೋರಿದ್ದಾರೆ. ಬಿಇಒ ನನಗೆ ನೋಟಿಸ್‌ ಕೊಡುವುದಾಗಲಿ ಅಥವಾ ಕ್ರಮ ತೆಗೆದುಕೊಳ್ಳುವುದಾಗಿ ಮಾಡಲು ಕಾನೂನಾತ್ಮಕವಾಗಿ ಬರುವುದಿಲ್ಲ ಎಂದು ತನ್ನ ಮೇಲಧಿಕಾರಿ ಬಿಇಒ ಬಗ್ಗೆಯೇ ಸಲ್ಲದ ಮಾತನ್ನು ಹೇಳುತ್ತಿದ್ದಾರೆ. ಇಂಥ ಅತಿರೇಕ, ಉದ್ಧಟತನದ ನಡವಳಿಕೆ ಮೈಗೂಡಿಸಿಕೊಂಡಿರುವ ಈ ಮುಖ್ಯಾಧ್ಯಾಪಕರ ಅವಶ್ಯಕತೆ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆಗೆ ಇಲ್ಲ. ಕೂಡಲೇ ಇವರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ತಹಶೀಲ್ದಾರ್‌, ಬಿಇಒ ಕಚೇರಿ ಎದುರೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿಯ ಪ್ರತಿಗಳನ್ನು ಡಿಡಿಪಿಐ ಮತ್ತು ಜಿಪಂ ಸಿಇಒ ಅವರಿಗೂ ಸಲ್ಲಿಸಲಾಗಿದೆ. ಎಸ್‌ಎಂಸಿ ಅಧ್ಯಕ್ಷ ವೈ.ಎ. ಬೋಳಿ, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರಾದ ಅಪ್ಪಣ್ಣ ಕಲಾದಗಿ, ಅಶೋಕ ಆಲೂರ, ಸಿದ್ದಪ್ಪ ಹಟ್ಟಿ, ಎಸ್‌.ಎಸ್‌.ಹೊಕ್ರಾಣಿ ಮತ್ತಿತರರು ಮನವಿ ಸಲ್ಲಿಸುವಾಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next