ಅಮೀನಗಡ: ಸುಮಾರು 60ಕ್ಕೂ ಹೆಚ್ಚು ಕಾಲ ಇಲ್ಲಿಯೇ ಇರುವ 12ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಂತಕ್ಕೊಂದು ಸೂರಿಲ್ಲ..ಮತದಾನ ಹಕ್ಕು ಪಡೆದರೂ ಬದುಕುವ ಹಕ್ಕಿಲ್ಲ…
ಇದು ಪಟ್ಟಣದ ಕೆರೆಯ ಪಕ್ಕದಲ್ಲಿ ಜೋಪಡಿ ಹಾಕಿಕೊಂಡು ಬದುಕು ನಡೆಸುತ್ತಿರುವ ಮೋದಿಕಾರ (ಮೋಡಕೇರ) ಜನಾಂಗದ 12ಕ್ಕೂ ಹೆಚ್ಚು ಕುಟುಂಬಗಳ ಪರಿಸ್ಥಿತಿ.
ಇವರು ಸುಮಾರು 60 ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ನೆಲೆಸಿದ್ದು, ಅವರಿಗೆ ಸ್ವಂತದ್ದು ಎಂದು ಹೇಳಿಕೊಳ್ಳಲು ಮನೆ ಇಲ್ಲ. ನಮ್ಮದು ಅಂತ ಹೇಳಿಕೊಳ್ಳಲು ಗಟ್ಟಿ ನೆಲ ಇಲ್ಲ. ಇಷ್ಟು ವರ್ಷಗಳು ಕಳೆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇವರಿಗೆ ವಾಸಿಸಲು ಸ್ಥಳ ನೀಡಿಲ್ಲ. ಇವರ ಸಮಸ್ಯೆ ಬಗೆಹರಿಸುವ ಪ್ರಯತ್ನವೂ ನಡೆದಿಲ್ಲ .
ಇವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅಳಲು ತೋಡಿಕೊಂಡಿದ್ದರು. ಆಗ ಗ್ರಾಪಂನಿಂದ 12 ಕುಟುಂಬಗಳಿಗೆ ಹಕ್ಕು ಪತ್ರ ಕೊಟ್ಟು, ಅಲ್ಲಿಯೇ ವಾಸಿಸಿ ಎಂದು ಹೇಳಿತ್ತು. ಇವರೆಲ್ಲ ಖುಷಿಯಿಂದ ಗ್ರಾಪಂ ನೀಡಿದ ಜಾಗೆಯಲ್ಲೇ ಜೋಪಡಿ ಹಾಕಿಕೊಳ್ಳಲು ಹೋಗಿದ್ದೇ ತಡ, ಅರಣ್ಯ ಇಲಾಖೆಯವರು ಬಂದು ಇಲ್ಲಿ ವಾಸಿಸಬೇಡಿ ಎಂದು ಮರಳಿ ಕಳುಹಿಸಿದ್ದರು. ಆ ಜಾಗೆ ಅರಣ್ಯ ಇಲಾಖೆಗೆ ಸೇರಿತ್ತು. ಆ ಪ್ರಯತ್ನ ವಿಫಲವಾದ ಬಳಿಕ ಜೋಪಡಿಯೇ ಗತಿಯೆಂದು ಇಂದಿಗೂ ಕೆರೆಯ ಪಕ್ಕದ ಖಾಲಿ ಜಾಗೆಯಲ್ಲೇ ವಾಸಿಸುತ್ತಿದ್ದಾರೆ.
ಮಳೆ ತಂದ ಅವಾಂತರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಈ ಕುಟುಂಬದವರು ತತ್ತರಿಸಿ ಹೋಗಿದ್ದಾರೆ. ರಕ್ಷಣೆ ಇಲ್ಲದೆ ಪರದಾಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗ ಗುಡಿಸಲುಗಳಿಗೆ ನೀರು ನುಗ್ಗುತ್ತಲೇ ಇದೆ. ಮಳೆ ಜತೆಗೆ ಕೆರೆಯ ನೀರು ಬರುತ್ತಿದೆ. ಇದರಿಂದ ವಿಷಜಂತುಗಳು ಮನೆಯೊಳಗೆ ಸೇರುತ್ತಿದ್ದು, ಅವುಗಳನ್ನು ಹೊರ ಹಾಕುವಲ್ಲಿಯೇ ದಿನರಾತ್ರಿ ಕಳೆಯುವಂತಾಗಿದೆ. ಗುಡಿಸಲುಗಳಲ್ಲಿದ್ದ ದವಸ ಧಾನ್ಯಗಳು ಹಾಳಾಗಿವೆ. ಮಳೆ ಬಂದಾಗೊಮ್ಮೆ ಸಮಸ್ಯೆ ಅನುಭವಿಸುವ ಈ ಕುಟುಂಬಗಳನ್ನು ಮೂರ್‍ನಾಲ್ಕು ಕಡೆ ಸ್ಥಳಾಂತರ ಮಾಡಿದ್ದಾರೆ. ಈಗ ಇದ್ದ ಜಾಗದಲ್ಲಿ ಮಳೆಯಿಂದ ಬದುಕು ಮೂರಾಬಟ್ಟೆಯಾಗಿದೆ. ದುರ್ವಾಸನೆಯೊಂದಿಗೆ ಜೀವನ ಬಂಡಿ ಸಾಗುತ್ತಿದೆ.
ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ನಮಗೆ ನೆಲೆ ಮಾತ್ರ ಸಿಕಿಲ್ಲ. ಮನವಿ ನೀಡಿ ಸಾಕಾಗಿದೆ. ಪ್ರತಿಸಲ ಬರುವ ಮಳೆಯಿಂದ ಬದುಕು ಕಷ್ಟವಾಗಿದೆ. ದಯಮಾಡಿ ನಮಗೆ ಇರಲು ಮನೆ ಕಟ್ಟಿಸಿಕೊಡಿ
.- ಕರಿಯಪ್ಪ ಮೋಡಕೇರ, ಪರಶುರಾಮ ಮೋಡಕೇರ, ಜೋಪಡಿ ನಿವಾಸಿಗಳು
ಪಟ್ಟಣದ ಕೆರೆ ಪಕ್ಕ ಬದುಕು ಕಟ್ಟಿಕೊಂಡ 12ಕ್ಕೂ ಹೆಚ್ಚು ಮೋಡಕೇರ ಕುಟುಂಬಗಳಿಗೆ ಮನೆಯಿಲ್ಲ. ಗಾಂವಠಾಣ ಜಾಗೆಯಲ್ಲಿ ಈ ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸಬೇಕು.
– ರಮೇಶ ಮುರಾಳ, ಗ್ರಾಪಂ ಮಾಜಿ ಅಧ್ಯಕ್ಷ
-ಎಚ್.ಎಚ್. ಬೇಪಾರಿ