ಬೆಳಗಾವಿ: ಅಣಕು ನ್ಯಾಯಾಲಯ ಸ್ಪರ್ಧೆಗಳು ವೃತ್ತಿ ಬದುಕಿಗೆ ಪೂರಕವಾಗಿದ್ದು ಇಲ್ಲಿ ಸಿಗುವ ಅನುಭವಗಳು ಅಪಾರ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ಸುನೀಲ್‌ದತ್ ಯಾದವ್ ಹೇಳಿದರು.
ಬೆಳಗಾವಿ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ 12 ನೇ ಎಂ.ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಅಣಕು ನ್ಯಾಯಾಲಯ ಸ್ಪರ್ಧೆ ಕಾನೂನು ಸಂಶೋಧನೆಗೆ ಸಂಬಂಧಿಸಿದ ಅಪಾರ ಅನುಭವ ನೀಡುತ್ತದೆ. ಇಲ್ಲಿ ಸಿಗುವ ಅನುಭವ ಜ್ಞಾನದ ಸಲುವಾಗಿ ಮಾತ್ರವಲ್ಲ, ಭವಿಷ್ಯದ ಅನುಭವಗಳ ಬಗ್ಗೆ ನಮ್ಮ ಕಣ್ಣು ತೆರೆಸುವಂತಿರುತ್ತದೆ. ಕಾನೂನಿನ ಬಗ್ಗೆ ಜ್ಞಾನ ಇದ್ದರಷ್ಟೆ ಉಪಯೋಗವಾಗದು, ಕಾನೂನು ಪದವಿ ಪಡೆದವರು ಭವಿಷ್ಯದ ಬದುಕಿನಲ್ಲಿ ನ್ಯಾಯವನ್ನು ಸರಿಯಾಗಿ ಅರ್ಥೈಸಿಕೊಂಡು ನ್ಯಾಯಾಲಯದ ನಡವಳಿಕೆ ಹಾಗೂ ನೀತಿಗಳನ್ನು ಜನತೆಗೆ ಸಮರ್ಥವಾಗಿ ದೊರಕಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಕಾಲೇಜು ವ್ಯಾಸಂಗ ಪೂರ್ಣಗೊಳಿಸಿದ ನಂತರ ವೃತ್ತಿ ಆರಂಭಿಸಲು ಕೆಲ ವರ್ಷ ಕಾಯಬೇಕಾಗುತ್ತದೆ. ಆದರೆ, ಇಂತಹ ಸ್ಪರ್ಧೆಗಳು ನಡೆಯುವುದರಿಂದ ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ, ಅನುಭವ ಸಿಗುತ್ತದೆ. ಅಣಕು ನ್ಯಾಯಾಲಯ ಸ್ಪರ್ಧೆಯ ಅನುಭವಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ನಡೆಯುವ ಸ್ಪರ್ಧೆಯಲ್ಲಿ ಸೋಲು-ಗೆಲವು ಇದ್ದರೂ ಅವುಗಳ ಬಗ್ಗೆ ತಲೆಕೆಡಿಸಿ ಕೊಳ್ಳದೆ ಇಲ್ಲಿ ಸಿಗುವ ಅನುಭವವನ್ನು ಜೀವನಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಅನಂತ ಮಂಡಗಿ ಮಾತನಾಡಿ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ. ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಸಿಗುವ ಕಾನೂನು ತಿರುಳನ್ನು ಮನವರಿಕೆ ಮಾಡಿಕೊಳ್ಳಬೇಕು. ಇಂತಹ ಸ್ಪರ್ಧೆಗಳಿಂದ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾನೂನು ಸಂಸ್ಥೆಯ ಬೋರ್ಡ್ ಆಫ್ ಮ್ಯಾನೇಜ್ ಮೆಂಟ್ ಚೇರ್ಮನ್ ಪಿ.ಎಸ್. ಸಾವುಕಾರ ಮಾತನಾಡಿ ಅಣಕು ನ್ಯಾಯಾಲಯ ಸ್ಪರ್ಧೆಯಿಂದ ಸಿಗುವ ಅನುಭವ ಹಾಗೂ ಯಶಸ್ಸು ಭವಿಷ್ಯದ ಬದುಕಿಗೆ ಅನುಕೂಲವಾಗಲಿದೆ. ದೇಶದ ವಿವಿಧ ಕಾನೂನು ಕಾಲೇಜುಗಳಿಂದ ಅಣಕು ನ್ಯಾಯಾಲಯ ಸ್ಪರ್ಧೆಗೆ ಬಂದು ಭಾಗವಹಿಸಿದವರನ್ನು ಅಭಿನಂದಿಸಿದರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ.ಎಂ. ಜೋಶಿ, ಕರ್ನಾಟಕ ಕಾನೂನು ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್ ಚೇರ್ಮನ್ ಎಂ.ಆರ್. ಕುಲಕರ್ಣಿ, ಆರ್. ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎ.ಎಚ್. ಹವಾಲ್ದಾರ್, ಅಣಕು ನ್ಯಾಯಾಲಯ ಸ್ಪರ್ಧೆಯ ಉಸ್ತುವಾರಿ ಅಶ್ವಿನಿ ಪರಬ್ ಉಪಸ್ಥಿತರಿದ್ದರು. ವೈಷ್ಣವಿ, ಮೃಣಾಲಿ, ಮನಸ್ವಿನಿ ಪರಿಚಯಿಸಿದರು. ಸೈಯದ್ ಬಿಲಾಲ್ ಕಾಜಿ ವಂದಿಸಿದರು. ಅಜಯ್ ದೇಸಾಯಿ, ಜಿಯನಾ ಜಾರ್ಜ್ ನಿರೂಪಿಸಿದರು.