Advertisement

ಅನುಮತಿ ಪಡೆಯದೆ ಮೊಬೈಲ್‌ ಟವರ್‌ ನಿರ್ಮಾಣ ಪ್ರಕರಣ

10:06 PM Jul 24, 2019 | Team Udayavani |

ಉಪ್ಪಿನಂಗಡಿ: ಗ್ರಾ.ಪಂ. ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಮೊಬೈಲ್‌ ಟವರ್‌ ನಿರ್ಮಾಣ ಮಾಡಿರುವವರಿಗೆ ನೋಟಿಸ್‌ ನೀಡಲು ಬಜತ್ತೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌ ಪಂರ್ದಾಜೆ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಮೊಬೈಲ್‌ ಟವರ್‌ಗಳು ನಿರ್ಮಾಣವಾಗಿವೆ. ಹೊಸ ಮೊಬೈಲ್‌ ಟವರ್‌ ಕೂಡ ನಿರ್ಮಾಣವಾಗುತ್ತಿದೆ. ಆದರೆ ಗ್ರಾ.ಪಂ.ನಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಗ್ರಾ.ಪಂ.ಗೆ ಪಾವತಿಸಬೇಕಾದ ವಾರ್ಷಿಕ ಶುಲ್ಕವನ್ನೂ ನೀಡುತ್ತಿಲ್ಲ. ಗ್ರಾ.ಪಂ.ನಿಂದ ಎನ್‌ಒಸಿ ಇಲ್ಲದೆಯೇ ಮೆಸ್ಕಾಂನವರು ಟವರ್‌ಗೆ ವಿದ್ಯುತ್‌ ಸಂಪರ್ಕ ನೀಡುತ್ತಿದ್ದಾರೆ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂಗೆ ಪತ್ರ ಬರೆಯಲು ಹಾಗೂ ಅನುಮತಿ ಪಡೆಯದೆ ಮೊಬೈಲ್‌ ಟವರ್‌ ನಿರ್ಮಾಣ ಮಾಡಿರುವವರಿಗೆ ನೋಟಿಸ್‌ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

Advertisement

ಕ್ರಮ ಕೈಗೊಂಡಿಲ್ಲ
ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಪಡೆಯಲು ಗ್ರಾ.ಪಂ.ನಿಂದ ಮೆಸ್ಕಾಂಗೆ ಎನ್‌ಒಸಿ ನೀಡಬೇಕಾಗುತ್ತದೆ. ಆದರೆ ಮೆಸ್ಕಾಂ ಕೆಲವರಿಂದ ಎನ್‌ಒಸಿ ಪಡೆದು ವಿದ್ಯುತ್‌ ಸಂಪರ್ಕ ನೀಡಿದರೆ ಇನ್ನು ಕೆಲವರಿಂದ ಎನ್‌ಒಸಿ ಪಡೆಯದೆಯೇ ವಿದ್ಯುತ್‌ ಸಂಪರ್ಕ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮೆಸ್ಕಾಂಗೆ ಈ ಹಿಂದೆಯೇ ಪತ್ರ ಬರೆಯಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಆರೋಪಿಸಿದರು.

ಜೋತು ಬಿದ್ದ ತಂತಿ ಬದಲಿಸಿ
ಜೋತು ಬಿದ್ದಿರುವ ಹಳೆಯ ತಂತಿಗಳ ಬದಲಾವಣೆ ಮಾಡಲು ಗ್ರಾಮಸಭೆಗಳಲ್ಲಿ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇವುಗಳಿಂದ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಜೋತು ಬಿದ್ದಿರುವ ವಿದ್ಯುತ್‌ ತಂತಿಗಳ ಬದಲಾವಣೆ ಮಾಡಲು ಮೆಸ್ಕಾಂಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸರಕಾರಿ ಸ್ಥಳ ಕಾದಿರಿಸಲು ನಿರ್ಣಯ
ಗಾ.ಪಂ. ರಸ್ತೆಯ ಬದಿಯಲ್ಲಿ ಹೆಚ್ಚಿನ ಕಡೆ ಸರಕಾರಿ ಸ್ಥಳಗಳಿದ್ದು, ಇದನ್ನು ಅತಿಕ್ರಮಣ ಮಾಡಲಾಗುತ್ತಿದೆ. ರಸ್ತೆ ವಿಸ್ತರಣೆ, ಚರಂಡಿ ನಿರ್ಮಾಣ, ಮೋರಿ ನಿರ್ಮಾಣ ಸಮಯದಲ್ಲಿ ಜಾಗ ಅತಿಕ್ರಮಣ ಮಾಡಿಕೊಂಡವರು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಇಂತಹ ಸ್ಥಳಗಳನ್ನು ಗುರುತಿಸಿ ಗ್ರಾ.ಪಂ. ಹೆಸರಿನಲ್ಲಿ ಕಾದಿರಿಸಲು ತಹಶೀಲ್ದಾರರಿಗೆ ಮತ್ತು ಗ್ರಾಮಕರಣಿಕರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಉಪಾಧ್ಯಕ್ಷೆ ಸುಜಾತಾ ನೆಕ್ಕರೆ, ಸದಸ್ಯರುಗಳಾದ ಗಣೇಶ್‌ ಕಿಂಡೋವು, ಚಂಪಾ, ಮಾಧವ ಪೂಜಾರಿ, ಆನಂದ ಕೆ.ಎಸ್‌., ಶಶಿತಾ, ನವೀನಾ, ಲೀಲಾವತಿ, ತೇಜಕುಮಾರಿ, ಪ್ರಸಿಲ್ಲಾ ಡಿ’ಸೋಜಾ, ರಾಜೇಶ್‌ ಪಿ., ಕಮಲಾಕ್ಷಿ ಉಪಸ್ಥಿತರಿದ್ದು, ಸಲಹೆ – ಸೂಚನೆ ನೀಡಿದರು. ಪಿಡಿಒ ಪ್ರವೀಣ್‌ ಕುಮಾರ್‌ ಸ್ವಾಗತಿಸಿ, ಸಾರ್ವಜನಿಕ ಅರ್ಜಿ, ಸರಕಾರದ ಸುತ್ತೋಲೆಯನ್ನು ಸಭೆಯಲ್ಲಿ ಮಂಡಿಸಿದರು. ಸಿಬಂದಿ ಸಹಕರಿಸಿದರು.

ಗ್ರಾಮಸಭೆಗೆ ಕಡ್ಡಾಯ ಹಾಜರಿಗೆ ಸೂಚನೆ
ಗ್ರಾಮಸಭೆಗಳಿಗೆ ಹೆಚ್ಚಿನ ಇಲಾಧಿಕಾರಿಗಳು ಹಾಜರಾಗುವುದಿಲ್ಲ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಅರಣ್ಯ, ಆಹಾರ ಇಲಾಖೆ ಅಧಿಕಾರಿಗಳು ಈ ತನಕವೂ ಗ್ರಾಮ ಸಭೆಗೆ ಹಾಜರಾಗಿಲ್ಲ, ಆದ್ದರಿಂದ ಈ ಬಾರಿ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆದು, ಗ್ರಾಮಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವ ಸಂಬಂಧ ತಾ.ಪಂ. ಇಒ ಅವರಿಗೆ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next